ಬಿಜೆಪಿಯ ಸಂತೋಷ ಕೂಟದ ಕಲ್ಲೇಟಿಗೆ ಎಲ್ಲ ಹಕ್ಕಿಗಳೂ ಉದುರಿ ಬೀಳುತ್ತಿವೆ: ಕಾಂಗ್ರೆಸ್ ಲೇವಡಿ

Update: 2023-11-09 16:57 GMT

ಬೆಂಗಳೂರು: ‘ಹರಿದ ಪಂಚೆಯಂತಾಗಿರುವ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ, ಒಟ್ಟಿನಲ್ಲಿ ಬಿಜೆಪಿ ವಿರುದ್ಧವೇ ಬಿಜೆಪಿಯ ಕಿತ್ತಾಟ ಎಂಬುದು ಮುಗಿಯದ ಧಾರಾವಾಹಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಗುರುವಾರ ಎಕ್ಸ್ (ಟ್ವಿಟರ್)ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ವಲಸಿಗರಿಗೆ ಆಪರೇಷನ್ ಕಮಲ ಮಾಡುವಾಗ ಜಾಮೂನ್ ಕೊಟ್ಟ ಬಿಜೆಪಿ ಈಗ ವಿಷ ಕೊಡುತ್ತಿದೆಯಂತೆ, ಹೀಗೆ ಹೇಳಿದ್ದು ಸ್ವತಃ ಬಿಜೆಪಿಯ ಶಾಸಕ ಎಸ್.ಟಿ.ಸೋಮಶೇಖರ್. ಬಿಜೆಪಿ ಕಚೇರಿಯಲ್ಲಿ ಯಾರು ಯಾರಿಗೆ ವಿಷ ಬೆರೆಸುತ್ತಿದ್ದಾರೋ, ಮದ್ದು ಅರೆಯುತ್ತಿದ್ದಾರೋ!, ಇತ್ತ ಕೆ.ಎಸ್.ಈಶ್ವರಪ್ಪ ಎಂಬ ಕೆಲಸವಿಲ್ಲದ ರಿಟೈರ್ಡ್ ರಾಜಕಾರಿಣಿ ವಲಸಿಗರ ವಿರುದ್ಧ ನಾಲಿಗೆ ಮಸೆಯುತ್ತಿದ್ದಾರೆ’ ಎಂದು ಟೀಕಿಸಿದೆ.

ಪೇಶ್ವೆ ವಂಶಸ್ಥರದ್ದೇ ಪಾರುಪತ್ಯ: ‘ಅಂತೂ ಇಂತೂ ಬಿಜೆಪಿಯ ಸಂತೋಷ ಕೂಟದ ಆಟ ಗೆಲುವಿನತ್ತ ಸಾಗುತ್ತಿದೆ, ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವ ಪಕ್ವ ಕಾಲ ಬಂದಿದೆ. ಲಿಂಗಾಯತ ನಾಯಕ ಬಿಎಸ್‍ವೈರನ್ನು ಮೂಲೆಯಲ್ಲಿ ಕೂರಿಸಿದ್ದಾಯ್ತು. ಹಿಂದುಳಿದ ವರ್ಗದ ಈಶ್ವರಪ್ಪರನ್ನು ಬಲವಂತವಾಗಿ ರಿಟೈರ್ಡ್ ಮಾಡಿದ್ದಾಯ್ತು. ಈಗ ಒಕ್ಕಲಿಗ ಸದಾನಂದಗೌಡರೂ ಹೈಕಮಾಂಡ್‍ನಿಂದ ಅವಮಾನಕ್ಕೊಳಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಸಂತೋಷ ಕೂಟದ ಕಲ್ಲೇಟಿಗೆ ಎಲ್ಲ ಹಕ್ಕಿಗಳೂ ಉದುರಿ ಬೀಳುತ್ತಿವೆ! ಕುಮಾರಸ್ವಾಮಿಯವರು ಹೇಳಿದಂತೆ ಇನ್ಮುಂದೆ ಬಿಜೆಪಿಯಲ್ಲಿ ಪೇಶ್ವೆ ವಂಶಸ್ಥರದ್ದೇ ಪಾರುಪತ್ಯ.!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ‘ಸಂತೋಷ ಕೂಟ’ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲ ತಲೆಗಳನ್ನೂ ಉರುಳಿಸಿ ‘ನಾಯಕತ್ವ ಮುಕ್ತ ಬಿಜೆಪಿ’ ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ..ಇದನ್ನು ಬಿಜೆಪಿಯವರೇ ಹೇಳಿದ್ದು. ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು. ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ ಎಚ್‍ಡಿಕೆಯವರಿಗೂ ಅರಿವಾಗಲಿದೆ. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಜೆಡಿಎಸ್, ಬಿಜೆಪಿ ಮೈತ್ರಿ ಬಿಜೆಪಿ ನಾಯಕರಿಗೆ, ಜೆಡಿಎಸ್ ಶಾಸಕರಿಗೆ ‘ಒಲ್ಲದ ಸಂಸಾರ ಒತ್ತಾಯದ ಬಾಳ್ವೆ’ಯಂತಾಗಿದೆ. ಜೆಡಿಎಸ್ ಶಾಸಕರು ಬಿಜೆಪಿಯೊಂದಿಗಿನ ಮೈತ್ರಿ ಆತ್ಮಹತ್ಯೆಗೆ ಸಮ ಎಂದು ತಿಳಿದಿದ್ದಾರೆ, ಇತ್ತ ಬಿಜೆಪಿ ನಾಯಕರು ಕುಮಾರಸ್ವಾಮಿ ನಮ್ಮ ಜಾಗವನ್ನು ಅತಿಕ್ರಮಿಸಿಸುತ್ತಿದ್ದಾರೆಂದು ಒಳಗೊಳಗೇ ಕೈ ಹಿಸುಕುತ್ತಿದ್ದಾರೆ. ಶರಣಗೌಡ ಕಂದನೂರು ಹಾಗೂ ಸದಾನಂದಗೌಡರ ಮಾತುಗಳಲ್ಲೇ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಮೈತ್ರಿಗೆ ಖಾತ್ರಿ ಇಲ್ಲದೆ ಕತ್ತರಿ ಬೀಳುವ ಕಾಲ ಸನ್ನಿಹಿತವಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News