ಬರ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಧರಣಿ

Update: 2024-04-23 09:32 GMT

ಬೆಂಗಳೂರು : ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಬರ ಪರಿಹಾರದ ಹಣ ಬಿಡುಗಡೆ ಮಾಡಲು ವಿಳಂಬ ಧೋರಣೆ ತೋರುತ್ತಿದೆ. ಆ ಮೂಲಕ ರಾಜ್ಯದ ಜನತೆಗೆ ಅದರಲ್ಲೂ ರೈತ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ವಿರುದ್ಧ ಇಂದು( ಮಂಗಳವಾರ) ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಧರಣಿಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, "ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕವನ್ನು ಹಾಗು ರೈತರನ್ನು ದ್ವೇಷಿಸುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದರೂ, ಇಂದಿನವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಹಾಗೂ ದೇಶದ ಜನರ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದೇವೆ" ಎಂದು ತಿಳಿಸಿದರು.

ಸೆಪ್ಟೆಂಬರ್ 22 ರಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಕೇಂದ್ರ ತಂಡ 4 ದಿನಗಳ ಕಾಲ ಪರಿಶೀಲನೆ ಮಾಡಿ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಈ ಮಧ್ಯೆ ಸಚಿವ ಕೃಷ್ಣಭೈರೇಗೌಡ ಹಾಗು ಪ್ರಿಯಾಂಕ್ ಖರ್ಗೆ ‌ ಕೇಂದ್ರ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ಎದುರಿಸುತ್ತಿರುವ ಬರಗಾಲದ ಬಗ್ಗೆ ವಿವರಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. 100 ವರ್ಷಗಳ ನಂತರ ಇಂಥ ಬರಗಾಲ ಎದುರಾಗಿದೆ. ಮನವಿ ಕೊಟ್ಟಿದ್ದರೂ ಕೂಡ ಅಮಿತ್ ಶಾ ಚನ್ನಪಟ್ಟಣಕ್ಕೆ ಬಂದಿದ್ದ ಸಂದರ್ಭದಲ್ಲಿ ಮನವಿಯನ್ನು ವಿಳಂಬವಾಗಿ ಸಲ್ಲಿಸಿದ್ದಾರೆ ಎಂದು ಹೇಳಿದ್ದರು ಎಂದರು.

ಗ್ಯಾರಂಟಿಗಳಿಗೆ ಒಂದೇ ಪೈಸೆಯನ್ನೂ ಕೇಂದ್ರದಿಂದ ಕೇಳಿಲ್ಲ :

ನಿರ್ಮಲಾ ಸೀತಾರಾಮನ್ ಅವರು ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಬರಗಾಲಕ್ಕೆ ಅಲ್ಲ ಎಂದು ಇಬ್ಬರೂ ಸುಳ್ಳು ಹೇಳಿದ್ದಾರೆ. ನಾವು ಗ್ಯಾರಂಟಿಗಳಿಗೆ ಒಂದೇ ಪೈಸೆಯನ್ನೂ ಕೇಂದ್ರದಿಂದ ಕೇಳಿಲ್ಲ. ನಮಗೆ ಬೇಕಾಗಿಯೂ ಇಲ್ಲ ಎಂದರು.

ನರೇಂದ್ರ ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ:

18172 ಕೋಟಿ ಗಳನ್ನೂ ಕೇಂದ್ರಕ್ಕೆ ಎನ್.ಡಿ.ಆರ್.ಎಫ್ ನಿಂದ ಬಿಡುಗಡೆ ಮಾಡುವಂತೆ ಕೋರಿ ಒತ್ತಾಯ ಮಾಡಿದ್ದೇವೆ. ಇದನ್ನು ಮಂಡಿಸಿ 7 ತಿಂಗಳಾಗಿವೆ. ನಾನೇ ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಸಂಬಂಧಪಟ್ಟವರಿಗೆ ತಿಳಿಸಿ ಕೂಡಲೇ ಬಿಡುಗಡೆ ಮಾಡುವಂತೆ ಹೇಳುವುದಾಗಿ ಹೇಳಿದ್ದರು. ನಂತರ ನಾನು ಕೃಷ್ಣಭೈರೇಗೌಡ ಡಿಸೆಂಬರ್ 20 ತಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23ಕೆ ಸಭೆ ಕರೆದು ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿ ಈವರೆಗೆ ಏನೂ ಮಾಡಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ. ರಾಜ್ಯಕ್ಕೆ ಮೇಲಿನಿಂದ ಮೇಲೆ ಬರಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಅಮಿತ್ ಶಾ ಬರಪರಿಹಾರ ಕೊಟ್ಟು ರಾಜ್ಯಕ್ಕೆ ಬರಲಿ:

ಇಂದು ಬರುತ್ತಿರುವ ಅಮಿತ್ ಶಾ ಅವರು ಸಭೆ ನಡೆಸಿ 18171 ಕೋಟಿ ಕೊಟ್ಟು ಆಮೇಲೆ ರಾಜ್ಯಕ್ಕೆ ಬರಲಿ. ನಿಮಗೆ ಯಾವುದೇ ಮತ ಕೇಳುವ ಹಕ್ಕು ಇಲ್ಲ ಎಂದು ಅವರಿಗೆ ಹೇಳುತ್ತೇವೆ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ ಎಂದರು.

ಧರಣಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೆವಾಲ, ಸಚಿವರಾದ ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ,ಬೈರತಿ ಸುರೇಶ್, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News