'ನೀವು ಗ್ಯಾರಂಟಿ ಬಗ್ಗೆ ಮಾತನಾಡುತ್ತೀರಾ?': ಕಾರ್ಯಕ್ರಮದ ವೇದಿಕೆಯಲ್ಲೇ ಬಿಜೆಪಿ ಶಾಸಕನನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು
ದಾವಣಗೆರೆ: ಇಂದು (ರವಿವಾರ) ನಗರದ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಸರಕಾರದ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕೆಲ ಕಾಲ ಗೊಂದಲ, ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.
ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾತನಾಡುತ್ತಿದ್ದ ಸಂದರ್ಭದಲ್ಲಿ, ''ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು, ಮೋದಿಯವರನ್ನು ಏನಾದರೂ ಕೇಳಿ ಅನ್ನ ಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ... '' ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.
ಶಾಸಕ ಬಿ.ಪಿ. ಹರೀಶ್ ಹೇಳಿದ್ದೇನು?
ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಂತೆ ದೇಶದ ಎಲ್ಲಾ ಪಕ್ಷಗಳು ಚುನಾವಣಾ ವೇಳೆ ಇದೇ ರೀತಿ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ದೇಶದ ಅಭಿವೃದ್ಧಿ ಏನಾಗಲಿದೆ ಎಂಬುದನ್ನು ಕೂಡ ನಾವು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರಿಗೆ ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಿಜೆಪಿ ಕೊಟ್ಟ ಭರವಸೆ ಈಡೇರಿಸಿದ್ದೀರ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿಯವರು ಹೇಳಿದ್ದರು. ಮೋದಿಯವರು ಆಡಳಿತ ನಡೆಸಿ 9 ವರ್ಷ ಆಗಿದೆ ಇನ್ನು ಅವರ ಖಾತೆಗೆ ಹಣ ಬಿದ್ದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆ ಈಡೇರಿಸಿದೆ. ನೀವು ಗ್ಯಾರಂಟಿ ಬಗ್ಗೆ ಮಾತನಾಡುತ್ತೀರಾ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
ನೀವು ಕೂಗಾಡುವುದನ್ನು ನಿಲ್ಲಿಸುವವರೆಗೂ ನಾನು ಕೂಗಾಡುತ್ತೇನೆ. ನಾನು ಕೂಡ ದಾವಣಗೆರೆ ಗರಡಿ ಮನೆಯಲ್ಲಿ ಬೆಳೆದವನು. ನನಗೂ ಕೂಗಡಾಲು ಬರುತ್ತದೆ ಎನ್ನುತ್ತಿದ್ದಂತೆ ವೇದಿಕೆಯತ್ತ ಕೆಲವು ಕಾರ್ಯಕರ್ತರು ಜಮಾಯಿಸಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಮಧ್ಯ ಪ್ರವಶಿಸಿದ ಸಚಿವ ಮಲ್ಲಿಕಾರ್ಜುನ್, ಇದು ಸರ್ಕಾರಿ ಕಾರ್ಯಕ್ರಮ. ಅವರು ಸರ್ಕಾರ ಎಚ್ಚರಿಸುವ ಕೆಲಸ ಮಾಡುವುದು ವಿರೋದ ಪಕ್ಷದವರ ಕೆಲಸ. ಅವರು ಮಾತನಾಡಲು ಅವಕಾಶ ಮಾಡಿಕೊಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.