ತ್ರಿವರ್ಣ ಧ್ವಜ ಹಿಡಿದು ಸಿಎಂ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ : ವಿಡಿಯೋ ವೈರಲ್
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೂ ಲೇಸ್ ಬಿಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಿಂದ ಆಕ್ಷೇಪಕ್ಕೆ ಕಾರಣವಾಗಿದೆ.
ಬುಧವಾರ ಇಲ್ಲಿನ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲು ಆಗಮಿಸಿದ ಸಿಎಂ ಶೂ ಬಿಚ್ಚಲು ಕಷ್ಟಪಡುತ್ತಿದ್ದರು. ಈ ವೇಳೆ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಬ್ಬರು ಸಿಎಂ ಶೂ ಲೇಸ್ ಬಿಚ್ಚಲು ಮುಂದಾದರು.
ಈ ಹಂತದಲ್ಲಿ ಮತ್ತೊಬ್ಬ ಕಾರ್ಯಕರ್ತ, ಆತನ ಕೈಯಲ್ಲಿದ್ದ ತೀವರ್ಣ ಧ್ವಜವನ್ನು ತೆಗೆದುಕೊಂಡಿದ್ದಾರೆ. ಬಳಿಕ ಮತ್ತೊಂದು ಶೂ ಲೇಸ್ ಅನ್ನು ಸಿದ್ದರಾಮಯ್ಯನವರೇ ಬಿಚ್ಚಿದ್ದು ವಿಡಿಯೋದಲ್ಲಿದೆ. ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಗಾಂಧಿ ಸ್ಮಾರಕನಿಧಿಯ ವೊಡೆ ಪಿ.ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕ್ಷಮೆ ಕೇಳಲಿ : ಗುಲಾಮಗಿರಿಯ ದವಡೆಯಿಂದ ಮುಕ್ತವಾದ ಭಾರತ, ಇಂದು ವಿಶ್ವದ ಮುಂಚೂಣಿ ರಾಷ್ಟ್ರವಾಗಿದೆ. ರಾಷ್ಟ್ರಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರ ಭಕ್ತರು ಎಂದರೆ ಕಾಂಗ್ರೆಸ್‌ಗೆ ಯಾವಾಗಲೂ ಕಾಲ ಕಸ. ಗುಲಾಮಗಿರಿಯನ್ನು ಆರಾಧಿಸಿಕೊಂಡು ಬಂದ ಕಾಂಗ್ರೆಸ್ಸಿಗರು ರಾಷ್ಟ್ರಧ್ವಜವನ್ನು ಗಾಂಧಿ ಜಯಂತಿಯಂದೇ ಗುಲಾಮಗಿರಿಯ ಸಂಕೇತದಂತೆ ಕಾಲಕಸವಾಗಿ ಕಂಡಿರುವುದು, ಸ್ವತಃ ಮುಖ್ಯಮಂತ್ರಿಗಳು ಅದನ್ನು ಆಕ್ಷೇಪಿಸದೆ ಉತ್ತೇಜಿಸುವ ಮಾದರಿಯಲ್ಲಿ ಉಡಾಫೆ ಪ್ರದರ್ಶಿಸಿರುವುದು ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷ ಭಾರತೀಯರಲ್ಲಿ ಕ್ಷಮೆ ಕೇಳಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.