ವಿದ್ಯುತ್ ಅಭಾವ ನೀಗಿಸಲು ವಿದ್ಯುತ್ ಸಬ್‍ಸ್ಟೇಷನ್‍ಗಳಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆಗೆ ಚಿಂತನೆ: ಸಚಿವ ಕೆ.ಜೆ.ಜಾರ್ಜ್
ಚಿಕ್ಕಮಗಳೂರು, ಆ.15: ರಾಜ್ಯದಾದ್ಯಂತ ತಲೆದೋರಿರುವ ವಿದ್ಯುತ್ ಅಭಾವ ನೀಗಿಸುವ ನಿಟ್ಟಿನಲ್ಲಿ ವಿದ್ಯುತ್ ಸಬ್ ಸ್ಟೇಷನ್‍ಗಳಿಗೆ ಸೋಲಾರ್ ಪ್ಲಾಂಟ್ ಅಳವಡಿಸಲು ಸರ್ವೇ ಕಾರ್ಯ ನಡೆಸಲಾಗುತ್ತಿದೆ. ರೈತರ ಪಂಪ್‍ಸೆಟ್‍ಗಳಿಗೂ ಸೋಲಾರ್ ಅಳವಡಿಸುವ ಚಿಂತನೆ ನಡೆಸಲಾಗಿದೆ. ಸರಕಾರ ಇದನ್ನು ಶೀಘ್ರ ಅನುಷ್ಠಾನಕ್ಕೆ ತರಲಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಟಿತವಾಗುತ್ತಿದೆ. ವಿದ್ಯುತ್ ಕೊರತೆ ನೀಗಿಸಲು ಥರ್ಮಲ್ ವಿದ್ಯುತ್ ಮತ್ತು ವಿಂಡ್ ಪವರ್‍ಅನ್ನು ಅವಲಂಭಿಸಿಬೇಕಾಗಿದೆ. ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಸರ್ವೀಸ್ ಮಾಡಲಾಗುತ್ತದೆ. ಇದರಿಂದ ಥರ್ಮಲ್ ವಿದ್ಯುತ್ ಉತ್ಪಾದನೆ ಕಡಿಮೆಯಾದ್ದು, ಥರ್ಮಲ್ ವಿದ್ಯುತ್ ಪ್ಲಾಂಟ್ ಜಾಸ್ತಿಮಾಡಲು ಆದೇಶ ಮಾಡಿದ್ದೇನೆ. ಕಳೆದೊಂದು ವಾರದಿಂದ ವಾತಾವರಣದಲ್ಲಿ ಗಾಳಿಯ ವೇಗ ಕಡಿಮೆಯಾಗಿರುವುದರಿಂದ ವಿಂಡ್ ಪವರ್ ಉತ್ಪಾದನೆಗೂ ಸಮಸ್ಯೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದರು.
ಶೀಘ್ರ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ನಿವಾರಿಸುವುದು ಹಾಗೂ ವಿದ್ಯುತ್ ಉತ್ಪಾದನೆಯ ಅಭಾವವನ್ನು ಕಡಿಮೆ ಮಾಡಲು ವಿದ್ಯುತ್ ಸಬ್ ಸ್ಟೇಷನ್‍ಗಳಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಬಗ್ಗೆ ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಸರ್ವೇ ಕಾರ್ಯ ನಡೆಯುತ್ತಿದೆ ಎಂದ ಅವರು, ರೈತರಿಗೆ ಅನುಕೂಲವಾಗುವಂತೆ ರೈತರ ಪಂಪ್‍ಸೆಟ್‍ಗಳಿಗೂ ಸೋಲಾರ್ ವಿದ್ಯುತ್ ಅಳವಡಿಕೆ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ. ಇದಕ್ಕೆ ಕೆಲ ಅಡೆತಡೆಗಳಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು.
ರಾಜ್ಯ ಸರಕಾರದ ಐದು ಗ್ಯಾರೆಂಟಿಗಳು ಜನಸಾಮಾನ್ಯರ ಮನಮುಟ್ಟಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನುಡಿದಂತೆ ನಡೆದಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರೆಂಟಿಗಳು ಯಶಸ್ವಿಯಾಗಿದ್ದು, ಎಐಸಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರ ಬೆಂಬಲವೂ ಇದಕ್ಕೆ ಕಾರಣ ಎಂದ ಅವರು, ನೋಟು ಅಮಾನ್ಯೀಕರಣ, ಕೋವಿಡ್‍ನಿಂದ ಜನರು ಆರ್ಥಿಕವಾಗಿ ಕುಸಿದು ಹೋಗಿದ್ದರು. ಬೆಲೆಏರಿಕೆಯಿಂದ ಬೇಸತ್ತಿದ್ದರು. ಆರ್ಥಿಕವಾಗಿ ಕುಗ್ಗಿದ ಜನರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಐದು ಗ್ಯಾರೆಂಟಿಗಳನ್ನು ರಾಜ್ಯ ಸರಕಾರ ಜಾರಿ ಮಾಡುತ್ತಿದ್ದು, ಈ ಮೂಲಕ ಜನರ ಹಣವನ್ನು ಜನರಿಗೆ ನೀಡಲಾಗುತ್ತಿದೆ, ನಾವು ಯಾವುದನ್ನೂ ಫ್ರೀಯಾಗಿ ನೀಡುತ್ತಿಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿದ್ದು, ಯುವ ನಿಧಿ ಯೋಜನೆಯನ್ನು ರಾಜ್ಯ ಸರಕಾರ ಶೀಘ್ರ ಜಾರಿಗೆ ತರಲಿದೆ. ಅನ್ಯಭಾಗ್ಯ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಅಕ್ಕಿ ನೀಡದ ಹಿನ್ನೆಲೆಯಲ್ಲಿ ಕೊಟ್ಟ ಮಾತಿನಂತೆ ರಾಜ್ಯ ಸರಕಾರ ಪ್ರತೀ ಕಾರ್ಡಿನ ಸದಸ್ಯರಿಗೆ 170ರೂ. ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡುತ್ತಿದೆ. ರಾಜ್ಯ ಸರಕಾರ ಯಾವುದೇ ಜಾತಿ, ಧರ್ಮವನ್ನು ನೋಡದೆ ಎಲ್ಲ ಜನರ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಭೂ ಅಕ್ರಮ ಮಂಜೂರಾತಿ ಸಂಬಂಧ ತನಿಖೆಗೆ ತಂಡ ರಚಿಸಲಾಗಿದೆ. ತಂಡ ತನಿಖೆ ನಡೆಸಿ ವರದಿ ನೀಡಿದ ಮೇಲೆ ಅಕ್ರಮ ಭೂ ಮಂಜೂರಾತಿಯನ್ನು ವಶಕ್ಕೆ ಪಡೆಯುವ ಸಂಬಂಧ ಕಂದಾಯ ಸಚಿವರು ತೀರ್ಮಾನ ತಗೆದುಕೊಳ್ಳಲಿದ್ದಾರೆ. ಅಕ್ರಮದಲ್ಲಿ ಭಾಗಿಯಾದವರಿಗೆ ಕಾನೂನಾತ್ಮಕ ಶಿಕ್ಷೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಶಾಸಕ ಎಚ್.ಡಿ.ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ.ಸಿಇಒ ಡಾ.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರ ಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.