ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ, ಹಲವು ಪ್ರದೇಶಗಳು ಜಲಾವೃತ

Update: 2023-07-24 13:07 GMT

ಮಡಿಕೇರಿ ಜು.24 : ಕಾವೇರಿನಾಡು ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಪರ್ಕ ವ್ಯವಸ್ಥೆ ಕಡಿತಗೊಂಡಿದೆ. ಮುಂಜಾಗೃತಾ ಕ್ರಮವಾಗಿ ಜು.25 ರಂದು ಕೂಡ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಜಿಲ್ಲೆಯಾದ್ಯಂತ 24 ಗಂಟೆಗಳಲ್ಲಿ 5 ಇಂಚಿಗೂ ಅಧಿಕ ಮತ್ತು ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ 9 ಇಂಚಿಗೂ ಅಧಿಕ ಮಳೆಯಾಗಿದೆ.

ಉತ್ತಮ ಮಳೆಯಾಗುತ್ತಿರುವುದರಿಂದ ನದಿ, ತೊರೆ, ಹಳ್ಳ, ಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ವ್ಯಾಪ್ತಿಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ನೀರಿನ ಹೊರ ಹರಿವು ನದಿಗೆ 23937 ಕ್ಯುಸೆಕ್ ಆಗಿದೆ.

ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿದಿರುವುದರಿಂದ ಅಲ್ಲಲ್ಲಿ ಮರ ಬಿದ್ದು ಮನೆ ಹಾಗೂ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ.

ಎಡಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದಲ್ಲಿ ಕಾವೇರಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ನೀರು ಶ್ರೀ ಭಗಂಡೇಶ್ವರ ದೇಗುಲದ ಮೆಟ್ಟಿಲುಗಳನ್ನು ಆವರಿಸಿದೆ. ದಕ್ಷಿಣ ಕೊಡಗಿನ ಲಕ್ಷ್ಣಣ ತೀರ್ಥ ನದಿಯ ಪ್ರವಾಹದಿಂದ ಬಾಳೆಲೆ ವ್ಯಾಪ್ತಿಯಲ್ಲಿ ಜನಜೀವನ ದುಸ್ತರವಾಗಿದೆ.

ಕುಶಾಲನಗರದ ಕೆಲವು ಬಡಾವಣೆಗಳು ಹಾರಂಗಿಯಿಂದ ಹೊರ ಬಿಡುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಪ್ರವಾಹದ ಆತಂಕಕ್ಕೆ ಸಿಲುಕಿವೆ. ಅಣೆÉಕಟ್ಟೆಯಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರು ಹರಿ ಬಿಟ್ಟಲ್ಲಿ ಎದುರಾಗಬಹುದಾದ ಸಮಸ್ಯೆಗಳ ಹಿನ್ನೆಲೆ ಈಗಾಗಲೇ ಪುರಸಭೆÉಯಿಂದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕುಶಾಲನಗರ ಸಮೀಪದ ಕಣಿವೆ ತೂಗು ಸೇತುವೆ ಬಳಿ ಜೀವನದಿ ಕಾವೇರಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಈ ದೃಶ್ಯ ನೋಡಲು ನಯನ ಮನೋಹರವಾಗಿದೆ. ಆದರೆ ಕ್ಷಣದಿಂದ ಕ್ಷಣಕ್ಕೆ ನೀರು ಏರಿಕೆಯಾಗುತ್ತಲೇ ಇರುವುದರಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

::: ವಿವಿಧೆಡೆ ಹಾನಿ :::

ಭಾರೀ ಗಾಳಿ ಮಳೆಯಿಂದಾಗಿ ಕೊಡಗಿನ ವಿವಿಧೆಡೆ ಹಾನಿ ಸಂಭವಿಸಿದೆ. ಸೋಮವಾರಪೇಟೆ ಹೋಬಳಿ ಜಂಬೂರು ಗ್ರಾಮದ ನಿವಾಸಿ  ವತ್ಸಲ ಹಾಗೂ ಸಂತೋಷ್ ಅವರ ವಾಸದ ಮನೆಯು ಭಾರಿ ಮಳೆಗಾಳಿಯಿಂದ ಮನೆಯ ಹಿಂಭಾಗದ ಗೋಡೆಯು ಕುಸಿದಿದ್ದು ಮೇಲ್ಚಾವಣಿ, ಗೋಡೆ, ಶೀಟ್ ಗಳು ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಅಮ್ಮತ್ತಿ ಹೋಬಳಿ ಬಾಡಗ ಬಾಣಂಗಾಲ ಗ್ರಾಮದ ಮಾಲತಿ ಎಂಬವರ ಮನೆಗೆ ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮದೆ ಗ್ರಾಮದ ತಳೂರು ಸೀತಾರಾಮ ಅವರಿಗೆ ಸೇರಿದ ಲೈನ್ ಮನೆ ಮೇಲೆ ಮರ ಬಿದ್ದು ಶೀಟ್ ಗಳು ಹಾನಿಯಾಗಿವೆ. ಮಡಿಕೇರಿ ತಾಲೂಕು ಮೇಘತ್ತಾಳು ಗ್ರಾಮದ ಐ.ಜಿ ಕಾರ್ಯಪ್ಪ ಅವರು ನಿರ್ಮಿಸಿರುವ ಕೆರೆಯು ಒಡೆದು ಸಿ.ಸಿ.ಸೋಮಯ್ಯ ಅವರ ಕಾಫಿ ತೋಟ,  ರಸ್ತೆಗೆ  ಹಾನಿಯಾಗಿದೆ.

ಅಲ್ಲದೆ  ಕಾಫಿ ಒಣ ಹಾಕಲು ನಿರ್ಮಿಸಿರುವ ಕಣದ ಮೇಲೆ ಮಣ್ಣು ತುಂಬಿದ ಹಿನ್ನೆಲೆ ಜೆಸಿಬಿಯಿಂದ ತೋಡಿನಲ್ಲಿ ಬಂದಿರುವ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.

 

ಕರಿಕೆಯ ಬಾಳೆ ಬಳಪು-ಕುಂಡತ್ತಿಕಾನ ಕಾಲೋನಿಯ ಹೊಸ ರಸ್ತೆ ಕುಸಿದಿದೆ.  ಚರಂಡಿ ನಿರ್ಮಾಣ ಮಾಡದೆ ಇರುವುದರಿಂದ ಮತ್ತು ತೋಡಿಗೆ ಮೋರಿ ನಿರ್ಮಿಸದೆ ಇರುವುದರಿಂದ ರಸ್ತೆ ಕುಸಿದಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಜನ ಸಂಚಾರ ಅಸಾಧ್ಯವಾಗಿದ್ದು, ಅತಂತ್ರ ಪರಿಸ್ಥಿತಿ ಎದುರಾಗಿದೆ. ಈ ಹಿಂದೆಯೇ ಹಲವು ಬಾರಿ ಗ್ರಾ.ಪಂ ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿರುವ ಸ್ಥಳೀಯರು, ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸಂಪಾಜೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟಿನ ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿದೆ.  ಕಿಂಡಿ ಅಣೆಕಟ್ಟಿನಲ್ಲಿ ಮಳೆಯ ನೀರು ಸರಾಗವಾಗಿ ಹರಿಯುತ್ತಿದೆ.

ಭಾಗಮಂಡಲ ವ್ಯಾಪ್ತಿಯ ಬೆಂಗೂರು ಗ್ರಾಮದ ದೋಣಿ ಕಾಡು ಪ್ರದೇಶಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಎನ್‍ಡಿಆರೆಫ್ ತಂಡ  ಭೇಟಿ ನೀಡಿ ವೀಕ್ಷಿಸಿದರು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆಯಿಂದ ತಡೆಗೋಡೆ, ಮರ, ವಿದ್ಯುತ್ ಕಂಬಗಳು ಬಿದ್ದಿವೆ.

ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ  ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ  ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ  ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಪಿಲ್ಟ್ರ್ ಹೌಸ್ ನಲ್ಲಿ ಎರಡು ಮೋಟಾರ್, ಕೂಟುಹೊಳೆಯಲ್ಲಿ ಟಿಸಿ ಹಾಳಾಗಿದ್ದನ್ನು ಮನಗಂಡ ಸದಸ್ಯರು ಖುದ್ದು ಸ್ಥಳಕ್ಕೆ ಧಾವಿಸಿ ನೀರಿನ ಸಮಸ್ಯೆಯನ್ನು ಸರಿಪಡಿಸಿದರು. ನಿರಂತರ ಮಳೆಯಿಂದ ಕೊಡಗಿನ ವಿವಿಧೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಮಳೆಯ ನಡುವೆಯೇ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

 

::: ಕೃಷಿ ಕಾರ್ಯಕ್ಕೆ ಅಡ್ಡಿ :::

ಪ್ರವಾಹದಿಂದಾಗಿ ಗದ್ದೆ ಮತ್ತು ತೋಟಗಳು ಜಲಾವೃತಗೊಂಡಿದ್ದು, ಯಾವುದೇ ಕೃಷಿ ಕಾರ್ಯ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮತ್ತು ಸೇತುವೆ ಸಂಪರ್ಕ ಕಡಿತಗೊಂಡಿರುವುದರಿಂದ ಕೃಷಿಕರು ಕೃಷಿಭೂಮಿ ಕಡೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ.

::: ಮಳೆ ವಿವರ :::

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 118.77 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 14.02 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1310.47 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1869.78 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 173.43 ಮಿ.ಮೀ. ಕಳೆದ ವರ್ಷ ಇದೇ ದಿನ 26.95 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1923.37 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2618.21 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 76.25 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 7 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 977.58 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1481.37 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 106.63 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1030.46 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1509.77 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 158.60, ನಾಪೋಕ್ಲು 151.20, ಸಂಪಾಜೆ 186.50, ಭಾಗಮಂಡಲ 197.40, ವಿರಾಜಪೇಟೆ ಕಸಬಾ 68.40, ಹುದಿಕೇರಿ 87.60, ಶ್ರೀಮಂಗಲ 91, ಪೊನ್ನಂಪೇಟೆ 85, ಅಮ್ಮತ್ತಿ 69.50, ಬಾಳೆಲೆ 56, ಸೋಮವಾರಪೇಟೆ ಕಸಬಾ 134.20, ಶನಿವಾರಸಂತೆ 89.60, ಶಾಂತಳ್ಳಿ 215, ಕೊಡ್ಲಿಪೇಟೆ 78, ಕುಶಾಲನಗರ 47, ಸುಂಟಿಕೊಪ್ಪ 76 ಮಿ.ಮೀ.ಮಳೆಯಾಗಿದೆ.

::: ಹಾರಂಗಿ ಜಲಾಶಯದ ನೀರಿನ ಮಟ್ಟ :::

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2853.77 ಅಡಿಗಳು. ಕಳೆದ ವರ್ಷ ಇದೇ ದಿನ 2856.05 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 62.40 ಮಿ.ಮೀ., ಕಳೆದ ವರ್ಷ ಇದೇ ದಿನ 5.20 ಮಿ.ಮೀ. ಇಂದಿನ ನೀರಿನ ಒಳಹರಿವು 17972 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2766 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 23937 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 2800 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News