ಕಾರ್ಪೋರೇಟ್ ಕಂಪೆನಿಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲಿ: ಡಿ.ಕೆ. ಶಿವಕುಮಾರ್

Update: 2024-08-19 18:12 GMT

ಬೆಂಗಳೂರು: ಮೂಲಭೂತ ಸೌಕರ್ಯ ಕೊರತೆ ಇರುವ ಸರಕಾರಿ ಶಾಲೆಗಳನ್ನು ಕಾರ್ಪೋರೇಟ್ ಕಂಪೆನಿಗಳು ದತ್ತು ಸ್ವೀಕಾರಮಾಡಿ ಅವುಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ‘ಸಿಎಸ್‍ಆರ್ ಶಿಕ್ಷಣ ಸಮಾವೇಶ-2024’ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕನಸುಗಳನ್ನು ಪೋಷಿಸೋಣ-ಭವಿಷ್ಯವನ್ನು ರೂಪಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ‘ಸಮರ್ಥ ಕರ್ನಾಟಕ’ ಮಾದರಿ ಶಾಲೆಗಳ ಬಲವರ್ಧನೆ ಹಾಗೂ ಪರಿವರ್ತನೆಗೆ ನಾಂದಿ ಹಾಕಬೇಕು ಎಂದರು.

ರಾಜ್ಯದ ಪ್ರಮುಖ ಕಂಪೆನಿಗಳು ಶಾಲೆಗಳ ಉನ್ನತೀಕರಣಕ್ಕೆ ಕೈ ಜೋಡಿಸಿರುವುದು ಸಂತಸದ ಸಂಗತಿ. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಉದ್ಯಮಿಗಳನ್ನು ಗುರುತಿಸಿ ಅವರ ನೆರವಿನಿಂದ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಅವುಗಳಿಗೆ ಹಂಚಿಕೆಯಾಗುವ ಹಣವನ್ನು ಕ್ರಮಬದ್ಧವಾಗಿ ಖರ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ನಗರ ವಿದ್ಯಾರ್ಥಿಗಳಿಗೆ ಸಿಗುವಂತಹ ಗುಣ ಮಟ್ಟದ ಸೌಲಭ್ಯಗಳು ಸಿಗಬೇಕು. ಇದರಿಂದ ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಬಹುದು. ಸರಕಾರ ಶಾಲಾ ಸಾಕ್ಷರತೆ ಮತ್ತು ಶಿಕ್ಷಣ ಇಲಾಖೆಗೆ 45ಸಾವಿರ ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ನೀಡಿದೆ. ಖಾಸಗಿ ಕಂಪೆನಿಗಳು ಸರಕಾರಿ ಶಾಲೆಗೆಳಿಗೆ ಅನುದಾನ ಮತ್ತು ಸಂಪನ್ಮೂಲ ನೀಡುವುದರ ಮೂಲಕ ಏಳಿಗೆಗೆ ಶ್ರಮಿಸಿದರೆ ವಿದ್ಯಾರ್ಥಿಗಳಿಗೂ, ಕಂಪೆನಿಗಳಿಗೂ ತೃಪ್ತಿ ತರುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ 46ಸಾವಿರ ಸರಕಾರಿ ಶಾಲೆಗಳು, 16ಸಾವಿರ ಅನುದಾನಿತ ಶಾಲೆಗಳಿದ್ದು, ಸುಮಾರು 56 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಹೊಸದಾಗಿ 12,500 ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 45 ಸಾವಿರ ಅತಿಥಿ ಶಿಕ್ಷಕರನ್ನು ಸಹ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ರಾಗಿ ಮಾಲ್ಟ್ ಇತ್ಯಾದಿಗಳನ್ನು ನೀಡಲಾಗುತ್ತಿದೆ. ಅಜೀಂ ಪ್ರೇಂಜಿ ಸಂಸ್ಥೆಯವರು ಮುಂದಿನ ಮೂರು ವರ್ಷಗಳವರೆಗೆ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ನೀಡಲಿದ್ದಾರೆ. ಇದಕ್ಕೆ ತಗಲುವ ವೆಚ್ಚ 15,000 ಕೋಟಿ ರೂ.ಗಳ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾರೆ. ಈ ವರ್ಷದಿಂದ 1,800 ಎಲ್.ಕೆ.ಜಿ., ಯು.ಕೆ.ಜಿ ಶಾಲೆಗಳನ್ನು ಪ್ರಾರಂಭಿಸಿದ್ದು, ಅದರಲ್ಲಿ 38,000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮಾತನಾಡಿ, ಈ ವರ್ಷ ಸುಮಾರು 500 ಶಾಲೆಗಳನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದರಿಂದ ಶಾಲೆಗಳಿಗೆ ಉತ್ತಮ ಸೌಲಭ್ಯ ದೊರೆತು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಾರೆ. ಇದರಿಂದ ಶಾಲೆಗಳಿಗೆ ಉತ್ತಮ ಫಲಿತಾಂಶ ಸಹ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಟೊಯೋಟಾ, ಎಂಬೆಸ್ಸಿ ಸೇರಿ ಮುಂತಾದ ಕಾರ್ಪೋರೇಟ್ ಕಂಪೆನಿಗಳ ಪ್ರತಿನಿಧಿಗಳು ತಮ್ಮ ಸಿ.ಎಸ್.ಆರ್ ಪ್ರಯಾಣವನ್ನು ಹಂಚಿಕೊಂಡರು. ಅಲ್ಲದೇ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿನ ಶಾಲೆಗಳ ಸಿ.ಎಸ್.ಆರ್. ಪ್ರಯೋಜನದ ಮಾಹಿತಿ ನೀಡಿದರು. ವಿವಿಧ ಕಾರ್ಪೋರೇಷನ್ ಕಂಪೆನಿಗಳು ಜಿಲ್ಲಾಧಿಕಾರಿಗಳ ಜೊತೆಗೆ ಸಿ.ಎಸ್.ಆರ್(ಶಿಕ್ಷಣ) ಒಡಂಬಡಿಕೆಗೆ ಸಹಿ ಹಾಕಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಅಜಯ್ ಸಿಂಗ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸರಕಾರದ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಸೇರಿ ಹಲವರು ಉಪಸ್ಥಿತರಿದ್ದರು.

ನಾನು ಸಹ ವಿದ್ಯಾಭ್ಯಾಸಕ್ಕೆ ಎಂದು ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬಂದವನು. ರಾಜಕೀಯ ಸೇರಿದ ಮೇಲೆ ನನ್ನ ವಿದ್ಯಾಭ್ಯಾಸ ನಿಂತು ಹೋಗಿತ್ತು. ನನ್ನ 46 ನೇ ವಯಸ್ಸಿನಲ್ಲಿ ಪದವಿ ಮುಗಿಸಿದೆ. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ. ನಮ್ಮ ಜಮೀನುಗಳನ್ನು ಶಾಲೆಗಳಿಗೆ ದಾನ ಮಾಡಿದ್ದೇವೆ. ಅಲ್ಲಿ ಶಾಲೆ ಕಟ್ಟಿಸಿ ನಮ್ಮ ಟ್ರಸ್ಟ್ ಮುಖಾಂತರ ದತ್ತು ಪಡೆದು ನಡೆಸುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News