ನಾಡಹಬ್ಬ ದಸರಾಗೆ ಕ್ಷಣಗಣನೆ; ನಾಳೆ ಹಂಸಲೇಖ ಅವರಿಂದ ಅಧಿಕೃತ ಚಾಲನೆ
ಮೈಸೂರು,ಅ.14: ವಿಶ್ವವಿಖ್ಯಾತ ಮೈಸೂರು ದಸರಾ 2023 ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ನಾಳೆ (ಅ.15) ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 15 ರಿಂದ 24 ರವರೆಗೆ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 15 ರ ರವಿವಾರ ಬೆಳಿಗ್ಗೆ 10.15 ರಿಂದ 1030 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಸಚಿವ ಸಂಪುಟದ ಅನೇಕ ಸಹೋದ್ಯೋಗಿಗಳು ಈ ವೇಳೆ ಉಪಸ್ಥಿತರಿರಲಿದ್ದಾರೆ.
ಮೈಸೂರು ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಡಾ.ಹಂಸಲೇಖ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದು, ಶನಿವಾರವೇ ಹಂಸಲೇಖ ಕುಟುಂಬ ಸಮೇತ ಮೈಸೂರಿಗೆ ಆಗಮಿಸಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿರುವ ಅವರು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅವರ ವಾಸ್ತವ್ಯಕ್ಕೆ ಜಿಲ್ಲಾಡಳಿ ಎಲ್ಲಾ ವ್ಯವಸ್ಥೆ ಮಾಡಿದ್ದು, ಅವರಿಗೆ ಯಾವುದೇ ಲೋಪವಾಗದಂತೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಅವರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ದಸರಾ ಉದ್ಘಾಟನೆ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿದ್ದು, ಉದ್ಘಾಟಕರನ್ನು ಸ್ವಾಗತಿಸಲು ಶಿಷ್ಟಾಚಾರದಂತೆ ಪಾಲನೆ ಮಾಡಲಿದ್ದಾರೆ.
ದಸರಾ ಉದ್ಘಾಟನೆ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ನಗರ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.