ಸುಳ್ಳು ಸುದ್ದಿ ಹಬ್ಬಿಸುವುದೇ ಬಿಜೆಪಿಗರ ಚಾಳಿ : ಈಶ್ವರ್ ಖಂಡ್ರೆ

Update: 2025-01-09 13:15 GMT

ಈಶ್ವರ್‌ ಖಂಡ್ರೆ

ಬೆಂಗಳೂರು : ಬಿಜೆಪಿಗರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿಯೇ ಸುಳ್ಳು ಸುದ್ದಿ ಹಬ್ಬಿಸುತ್ತಾ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಿಪುರದಲ್ಲಿ ಈಗಾಗಲೇ ರಾತ್ರಿ 9ರವರೆಗೆ ಸಂಚಾರಕ್ಕೆ ಅವಕಾಶವಿದೆ. ಇದರ ಜೊತೆಗೆ ಎರಡು ರಾಜ್ಯಗಳ ಎರಡು ಬಸ್ ಸಂಚಾರಕ್ಕೆ ಹಿಂದಿನಿಂದಲೂ ಅವಕಾಶವಿದೆ. ಇದಲ್ಲದೆ ಆಂಬುಲೆನ್ಸ್ ಹಾಗೂ ಆರೋಗ್ಯ ನಿಮಿತ್ತ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಿಜೆಪಿ ಇಲ್ಲಸಲ್ಲದ ಆರೋಪ ಮಾಡಿ ಟ್ವೀಟ್ ಮಾಡಿರುವುದು ಅಕ್ಷಮ್ಯ. ಅವರ ಕಾಲದಲ್ಲೂ ರಾತ್ರಿ ಬಸ್ ಸೇವೆ ಇತ್ತು ಎಂದರು.

ನನ್ನನ್ನು ಕರ್ನಾಟಕದ ಅರಣ್ಯ ಸಚಿವರೋ?, ಕೇರಳದ ಅರಣ್ಯ ಸಚಿವರೋ? ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ, ಕರ್ನಾಟಕದ ಜನತೆಯೇ ಈ ಪ್ರಶ್ನೆಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದರು.

ಹಲವು ವರ್ಷಗಳಿಂದ ಬಂಡೀಪುರ ಮತ್ತು ವಯನಾಡು ನಡುವೆ ರಾತ್ರಿ ಬಸ್ ಸಂಚಾರ ನಡೆಯುತ್ತಿದೆ. ಬಿಜೆಪಿಗರಿಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಸುಳ್ಳು ಅವರ ಮನೆ ದೇವರಾಗಿದೆ ಎಂದು ಈಶ್ವರ್ ಖಂಡ್ರೆ ಲೇವಡಿ ಮಾಡಿದರು.

ಸುದ್ದಿಯನ್ನು ತಿರುಚಿ, ಸುಳ್ಳು ಸುದ್ದಿ ಹಬ್ಬಿಸುವ ಬಿಜೆಪಿಗರಿಗೆ ನಾಚಿಕೆ ಆಗಬೇಕು. ದೇಶದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕಾಯ್ದೆ ತಂದಿದ್ದು ಇಂದಿರಾಗಾಂಧಿ. ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದೇವೆ.  ಆನೆಗಳನ್ನು ಗುಂಡಿಟ್ಟು ಕೊಲ್ಲಲು ಅನುಮತಿ ಕೊಡಿ ಎಂದು ಸದನದಲ್ಲಿ ಹೇಳುವ ಬಿಜೆಪಿಗರು, ಈಗ ವನ್ಯಜೀವಿ ಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಗರ ಇಂತಹ ಮಾತು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಎಂದು ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News