ಬಂಡಿಪುರ ಬಳಿ ಕಾರು ಅಡ್ಡಗಟ್ಟಿ ದಂಪತಿಗೆ ಹಲ್ಲೆ; ಪ್ರಕರಣ ದಾಖಲು
ಬೆಂಗಳೂರು: ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಕಾರಿನಲ್ಲಿದ್ದ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಪುರದಲ್ಲಿ ವರದಿಯಾಗಿದೆ.
ಆಗಸ್ಟ್ 6ರಂದು ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಡಿಪುರದ ಬಳಿ ಕಿಡಿಗೇಡಿಗಳ ಗುಂಪೊಂದು ಕಾರಿನಲ್ಲಿ ಬಂದು ದಂಪತಿ ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ದಂಪತಿ ಇದ್ದ ಕಾರಿನ ಬಳಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಾರಿನಲ್ಲಿದ್ದ ದಂಪತಿಗೆ ಹಲ್ಲೆ ನಡೆಸಿ, ಮಹಿಳೆಯ ಕೈಗಳನ್ನು ಹೊರಗೆ ಎಳೆದಿದ್ದಾರೆ. ಇದರಿಂದ ಮಹಿಳೆ ಗಾಯಗೊಂಡಿದ್ದಾರೆ. ಅಲ್ಲದೇ ಕಾರಿನ ಡ್ಯಾಶ್‌ಕ್ಯಾಮ್ ಅನ್ನು ಹಾನಿ ಮಾಡಲು ಯತ್ನಿಸಿದ್ದಾರೆ.
ಈ ವಿಡಿಯೋವನ್ನು ಥರ್ಡ್ ಐ ThirdEye ಎಂಬ ಟ್ವಿಟರ್ ಖಾತೆ ಬಳೆಕೆದಾರರು ಪೋಸ್ಟ ,ಮಾಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ
ʼʼಈ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 6ರಂದು ನಡೆದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿʼʼ ಎಂದು ದಂಪತಿಗೆ ಸೂಚಿಸಿದ್ದಾರೆ. ಅಲ್ಲದೇ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಅವರ ದೂರವಾಣಿ ನಂಬರ್ ಅನ್ನು ಸಹ ಹಂಚಿಕೊಂಡಿದ್ದಾರೆ.
ಪ್ರಕರಣ ದಾಖಲು
ಎಡಿಜಿಪಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ, ಘಟನೆ ನಡೆದ ದಿನ ರಾತ್ರಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.