ನಟ ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಿಕೆ

Update: 2024-09-27 15:19 GMT

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಇನ್ನಿತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 57ನೇ ಸಿಸಿಎಚ್ ನ್ಯಾಯಾಲಯ ಸೆ.30ಕ್ಕೆ ಮುಂದೂಡಿದೆ. ಇದರಿಂದ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆರೋಪಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ.

ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ ಸರಕಾರಿ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಅವರು ಆರೋಪಿಗಳಿಗೆ ಜಾಮೀನು ನೀಡದಂತೆ ಶುಕ್ರವಾರ ತಕರಾರು ಅರ್ಜಿ ಸಲ್ಲಿಸಿದರು.

ವಾದ ಆರಂಭಿಸಿದ ದರ್ಶನ್ ಪರ ವಕೀಲ ಸುನೀಲ್, ಜಾಮೀನು ವಿಚಾರಣೆ ಸಂಬಂಧ ಎಸ್‍ಪಿಪಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ವಾದ ಮಂಡಿಸಲು ಸಮಯಾವಕಾಶದ ಅಗತ್ಯವಿದೆ' ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

ಪ್ರಕರಣದ ಎ1 ಆರೋಪಿತೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ಕೊಲೆ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ. ಅಶ್ಲೀಲ ಸಂದೇಶ ಕಳುಹಿಸಿದ ಮೇರೆಗೆ ಪ್ರಕರಣದ ಇನ್ನಿತರ ಆರೋಪಿಗಳು ನಗರಕ್ಕೆ ಕರೆತಂದಿದ್ದರು. ತಮ್ಮ ಮನೆಯ ಕೆಲಸಗಾರ ಪವನ್ ಹಾಗೂ ದರ್ಶನ್ ಅವರೊಂದಿಗೆ ಶೆಡ್‍ಗೆ ಹೋಗಿರುವ ಬಗ್ಗೆ ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆಯೇ ಹೊರತು ಕೊಲೆ ಮಾಡಿದ್ದಾರೆ ಎಂದು ಹೇಳಿಲ್ಲ. ಚಾರ್ಜ್‍ಶೀಟ್‍ನಲ್ಲಿಯೂ ಪೊಲೀಸರು ನಮೂದಿಸಿಲ್ಲ ಎಂದರು.

ಪಟ್ಟಣಗೆರೆ ಶೆಡ್‍ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷಿ ಕಿರಣ್, ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದರು ಎಂದು ಹೇಳಿಕೆ ನೀಡಿದ್ದಾರೆ. ಹೊಡೆದ ಮಾತ್ರಕ್ಕೆ ಕೊಲೆ ಮಾಡಿದಂತೆಯೇ ಎಂದು ಪ್ರಶ್ನಿಸಿದ ವಕೀಲರು, ಕೃತ್ಯದ ವೇಳೆ ಆರೋಪಿ ವಿನಯ್, ಪವಿತ್ರಾಗೌಡಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಇದರಲ್ಲಿ ಕೊಲೆಗೆ ಒಳಸಂಚು ಏನಿದೆ, ಹೀಗಾಗಿ, ತಮ್ಮ ಕಕ್ಷಿದಾರರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಪ್ರಕರಣದ 8ನೇ ಆರೋಪಿ ರವಿಶಂಕರ್ ಜಾಮೀನು ಅರ್ಜಿ ಸಂಬಂಧ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದರು. ಇಬ್ಬರು ಆರೋಪಿಗಳ ವಾದಕ್ಕೆ ಸೋಮವಾರ ಪ್ರತಿವಾದ ಮಾಡುವುದಾಗಿ ಎಸ್‍ಪಿಪಿ ತಿಳಿಸಿದರು. ಇದರಂತೆ ನಟ ದರ್ಶನ್ ಸೇರಿ ಮೂವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ.30ಕ್ಕೆ ಮುಂದೂಡಿದರೆ, ಇದೇ ಪ್ರಕರಣದಲ್ಲಿ ಇನ್ನಿತರ ಐವರು ಆರೋಪಿಗಳು ಸಲ್ಲಿಸಿರುವ ಜಾಮೀನು ವಿಚಾರಣೆಯನ್ನು ಅ.5ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News