ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ಶಿಕ್ಷೆಗೆ ಕೋರ್ಟ್ ಮಧ್ಯಂತರ ತಡೆ

Update: 2024-01-02 15:43 GMT

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ತಾತ್ಕಾಲಿಕ ತಡೆ ಸಿಕ್ಕಿದೆ. ದಂಡ ಪಾವತಿಸದಿದ್ದರೆ ಆರು ತಿಂಗಳು ಜೈಲು ಶಿಕ್ಷೆಯ ಆದೇಶ ಹಿನ್ನೆಲೆ ತೀರ್ಪು ಪ್ರಶ್ನಿಸಿ ಸಚಿವರು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪ ಅವರಿಗೆ ಡಿ.29ರಂದು ಶಿಕ್ಷೆ ವಿಧಿಸಿತ್ತು. ಸಚಿವರ ವಿರುದ್ಧ ದಾವೆ ಹೂಡಿದ್ದ ರಾಜೇಶ್ ಎಕ್ಸ್ ಪೋರ್ಟ್ ಕಂಪೆನಿಗೆ 6.96 ಕೋಟಿ ರೂ. ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ಮಧು ಬಂಗಾರಪ್ಪ ಅವರಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು. ಮಧು ಬಂಗಾರಪ್ಪ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 56ನೆ ಸಿಟಿ ಸಿವಿಲ್ ಕೋರ್ಟ್, ದಂಡದಲ್ಲಿ ಶೇ.20ರಷ್ಟು ಮೊತ್ತವನ್ನು ಠೇವಣಿಯಿಡುವ ಷರತ್ತಿನೊಂದಿಗೆ ಜೈಲು ಶಿಕ್ಷೆ ಅಮಾನತುಗೊಳಿಸಿದೆ. ಒಂದು ತಿಂಗಳೊಳಗೆ ಈ ಷರತ್ತು ಪಾಲಿಸದಿದ್ದರೆ ಮಧ್ಯಂತರ ತಡೆ ರದ್ದಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣವೇನು?: ಆಕಾಶ್ ಆಡಿಯೊ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು ರಾಜೇಶ್ ಎಕ್ಸ್ ಪೋರ್ಟ್ ಕಂಪೆನಿಗೆ 2011ರಲ್ಲಿ 6.60 ಕೋಟಿ ರೂ. ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ, ಮಧು ಬಂಗಾರಪ್ಪ ಅವರ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ ಚೆಕ್ ಬೌನ್ಸ್ ಆಗಿತ್ತು. ಆನಂತರ ರಾಜೇಶ್ ಎಕ್ಸ್ ಪೋರ್ಟ್ ಕಂಪೆನಿಯು ದಾವೆ ಹೂಡಿತ್ತು. ಬಳಿಕ ಮಧು ಬಂಗಾರಪ್ಪ ಅವರು ಕೋರ್ಟ್‍ನಲ್ಲಿ ಕೇವಲ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಹೀಗಾಗಿ, ಕಂಪೆನಿಯು ಮತ್ತೆ ನ್ಯಾಯಾಲಯದ ಮೊರೆ ಹೋಗಿತ್ತು.

2024ರ ಜ.30ರೊಳಗೆ 6.10 ಕೋಟಿ ರೂ. ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ನೀಡಿದ್ದರಾದರೂ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆ ಮುಚ್ಚಳಿಕೆ ಒಪ್ಪಲು ನಿರಾಕರಿಸಿತು. ಏಕೆಂದರೆ, ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಬರೆದುಕೊಟ್ಟರೂ ಅದನ್ನು ಪಾಲಿಸಿರಲಿಲ್ಲ. ಹೀಗಾಗಿ, ನ್ಯಾಯಾಲಯ ಅವರ ಮನವಿ ತಿರಸ್ಕರಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News