ಗೋಹತ್ಯೆ ನಿಷೇಧ ಕಾಯ್ದೆ ರದ್ದು ಪ್ರಸ್ತಾವ ಸರಕಾರದ ಮುಂದಿಲ್ಲ: ಸಚಿವ ಕೆ.ವೆಂಕಟೇಶ್
ಬೆಂಗಳೂರು, ಜು.5: ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ವಿಚಾರವಾಗಿ ಬುಧವಾರ ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ. ವೆಂಕಟೇಶ್, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ನ್ನು ರದ್ದುಪಡಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ಹಾಗಾಗಿ ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಆದರೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ವೆಂಕಟೇಶ್ ಅವರ ಹೇಳಿಕೆಗೆ ಪೂರಕವಾಗಿ ಸಚಿವ ಕೃಷ್ಣಬೈರೇಗೌಡ, ಆರ್. ಬಿ. ತಿಮ್ಮಾಪುರ ಮತ್ತಿತರ ಆಡಳಿತ ಪಕ್ಷದ ಸದಸ್ಯರು, ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ. ಆದರೂ ಬಿಜೆಪಿ ಸದಸ್ಯರು ಕಾಲಹರಣ ಮಾಡಲು ಅನಗತ್ಯವಾಗಿ ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಭಾರತ ಗೋ ಮಾಂಸ ರಫ್ತಿನಲ್ಲಿ ವಿಶ್ವದಲ್ಲೇ 2ನೆ ಸ್ಥಾನದಲ್ಲಿದೆ. ಪ್ರತಿವರ್ಷ 26 ಸಾವಿರ ಟನ್‍ಗೂ ಅಧಿಕ ಗೋಮಾಂಸ ರಫ್ತಾಗುತ್ತಿದೆ. ಮೊದಲು ಇದನ್ನು ನಿಲ್ಲಿಸಿ ಎಂದು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯುವ ಸಂದರ್ಭದಲ್ಲಿ ಸಭಾಪತಿ ಬಸವರಾಜಹೊರಟ್ಟಿ ಮಧ್ಯ ಪ್ರವೇಶಿಸಿ, ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ಕೊಟ್ಟಿದ್ದಾರೆ. ಹೀಗಿದ್ದರೂ ಅದೇ ವಿಷಯವನ್ನು ಯಾಕೆ ಪ್ರಸ್ತಾಪ ಮಾಡುತ್ತೀದ್ದೀರಿ ಎಂದು ಬಿಜೆಪಿ ಸದಸ್ಯರಿಗೆ ಹೇಳಿದರು. ಸದಸ್ಯರ ಧರಣಿ ನಡೆವೆಯೇ ಸಭಾಪತಿ ಬೇರೆ ಕಲಾಪವನ್ನು ಕೈಗೆತ್ತಿಕೊಂಡರು.