ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ‘ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ ರಚನೆ: ಸಚಿವ ಸಂಪುಟ ನಿರ್ಧಾರ

Update: 2023-07-27 18:30 GMT

ಬೆಂಗಳೂರು, ಜು.27: ಲೋಕೋಪಯೋಗಿ ಇಲಾಖೆಯಡಿ ಪಿಪಿಪಿ ಯೋಜನೆಯಡಿ ಮಾತ್ರ ಅನ್ವಯವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಾಧಿಕಾರವು ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ ಯೋಜನೆಯ ಆದ್ಯತಾ ಪಟ್ಟಿಗಳನ್ನು ರಚಿಸಲಿದೆ ಎಂದರು.

ಅಂತರ್‍ರಾಜ್ಯ ಸಂಪರ್ಕಿಸುವ ಹೆದ್ದಾರಿಗಳು, ಕೈಗಾರಿಕಾ ಕಾರಿಡಾರ್ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿ ತಯಾರಿಸುವುದು, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಸೂಕ್ತ ಯೋಜನೆ ರಚಿಸುವುದು, ತಾತ್ವಿಕ ಅನುಮೋದನೆ ನೀಡಲಿದೆ ಎಂದು ಅವರು ಹೇಳಿದರು.

ಅಲ್ಲದೆ, ಪಿಪಿಪಿ ಗುತ್ತಿಗೆಗಳ ಸಂಗ್ರಹಣೆ, ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಅತ್ಯುತ್ತಮ ಮಾನದಂಡಗಳ ಅನುಗುಣವಾಗಿ ಮಾರ್ಗಸೂಚಿಗಳನ್ನು ಹಾಗೂ ಸಂಗ್ರಹಣ ವಿಧಾನಗಳನ್ನು ರಚನೆ ಮಾಡಲು ಈ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ರಾಜ್ಯಾದ್ಯಂತ ಸಮಗ್ರ ಶಿಶು ಯೋಜನೆಯಡಿ ಆರು ತಿಂಗಳಿನಿಂದ ಆರು ವರ್ಷದ ವರೆಗಿನ ಮಕ್ಕಳಿಗೆ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಯಾವುದೆ ಅಡೆತಡೆ ಇಲ್ಲದೆ ಮೊಟ್ಟೆ ವಿತರಿಸಲು, ವಿಭಾಗವಾರು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಇದಕ್ಕಾಗಿ 2023-24ನೆ ಸಾಲಿನ ಅಂಗನವಾಡಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಮೊಟ್ಟೆಗೆ 6 ರೂ.ಮೀರದಂತೆ ಅಂದಾಜು 297.19 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಈ ಹಿಂದೆ ಬಾಲ ವಿಕಾಸ ಸಮಿತಿಯ ಜಂಟಿ ಖಾತೆಗೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಣ ಜಮಾ ಮಾಡುತ್ತಿದ್ದರು ಎಂದು ಅವರು ಹೇಳಿದರು.

ನಿಗದಿತ ಸಮಯದಲ್ಲಿ ಅನುದಾನ ಬಿಡುಗಡೆಯಾಗದೆ ಇದ್ದಾಗ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ವಂತ ಹಣದಿಂದ ಮೊಟ್ಟೆ ಖರೀದಿಸಿ ನೀಡಬೇಕಾಗಿತ್ತು. ಈ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯವರು ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ, ಅದಕ್ಕೆ ಅವಕಾಶ ಇರಲಿಲ್ಲ. ಆದುದರಿಂದ, ವಿಭಾಗವಾರು ಟೆಂಡರ್ ಕರೆದು ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಹಾಗೂ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿಕೊಂಡಿರುವ ಪ್ರದೇಶದ ಲೆಕ್ಕಪರಿಶೋಧನೆ ಮಾಡಿ, ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ ಖನಿಜಗಳನ್ನು ತೆಗೆದು ರಾಜಧನ ಪಾವತಿಸದೆ ಸಾಗಾಣಿಕೆ ಮಾಡಿರುವ ಪ್ರಕರಣಗಳಲ್ಲಿ 6105 ಕೋಟಿ ರೂ.ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದರು.

ಆದರೆ, ವಿವಿಧ ಕಾರಣಗಳಿಂದ ದಂಡದ ಮೊತ್ತವನ್ನು ವಸೂಲು ಮಾಡಿರಲಿಲ್ಲ. ಆದುದರಿಂದ, ಕರಸಮಾಧಾನದ ರೀತಿಯಲ್ಲಿ ದಂಡ ಪಾವತಿಸಲು ಒಂದಾವರ್ತಿ ಅವಕಾಶ ನೀಡಲು ನಿಬಂಧನೆಗಳನ್ನು ರಚನೆ ಮಾಡಲು ಸಂಪುಟ ಸಮಿತಿ ರಚನೆ ಮಾಡಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.

ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 22.70 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋಯುರಾಲಿಜಿ ಸಂಸ್ಥೆಗೆ ಅನೆಕ್ಸ್ ಕಟ್ಟಡ ನಿರ್ಮಾಣಕ್ಕಾಗಿ 26 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 8.5 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಹಾಗೂ 18 ಕೋಟಿ ರೂ.ಗಳನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿನ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮತ್ತು ಇತರ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಸಲಹೆ ಹಾಗೂ ಹೈಕೋರ್ಟ್‍ನ ಆದೇಶದಂತೆ ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯಲ್ಲಿನ ಪ್ರವರ್ಗ 3ಎ ಕ್ರಮ ಸಂಖ್ಯೆ 2ರಲ್ಲಿ ನಮೂದಾಗಿರುವ ‘ಕೊಡಗರು’ ಎಂಬುದರ ಬದಲಾಗಿ ‘ಕೊಡವ’ ಮತ್ತು ‘ಕೊಡವರು’ ಎಂದು ಬದಲಾಯಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ನಬಾರ್ಡ್‍ನ ಆರ್‍ಐಡಿಎಫ್ ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು 140 ಕೋಟಿ ರೂ.ಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ. ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ರಾಜಶೇಖರ್ ಇವರನ್ನು ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ ಹುದ್ದೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸನ್ನಡತೆ ಆಧಾರದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಧಾರವಾಡದಲ್ಲಿರುವ ಕಾರಾಗೃಹಗಳಿಂದ 67 ಮಂದಿ ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ವಿಧಾನಮಂಡಲದ ಅಧಿವೇಶನ ಸಮಾಪನಗೊಳಿಸಲು ರಾಜ್ಯಪಾಲರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಡಾ.ಮೈತ್ರಿಗೆ ಕೆಎಎಸ್ ಹಿರಿಯ ಶ್ರೇಣಿ ಹುದ್ದೆ:

ಡಾ.ಮೈತ್ರಿ 2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಮೀಸಲಾತಿಯಡಿ ತಮಗೆ ಗ್ರೂಪ್ ಎ ವೃಂದದ ಕೆಎಎಸ್ ಹಿರಿಯ ಶ್ರೇಣಿ ಹುದ್ದೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯ, ವಿಧಾನಸಭೆಯಲ್ಲಿ ನಡೆದಿರುವ ಚರ್ಚೆಯನ್ನು ಪರಿಶೀಲಿಸಿ ಸೂಪರ್ ನ್ಯೂಮರರಿ ಪೋಸ್ಟ್ ರಚನೆ ಮಾಡಿ ಅವರಿಗೆ ಕೆಎಎಸ್ ಹಿರಿಯ ಶ್ರೇಣಿ ಹುದ್ದೆ ನೀಡುವ ಮನವಿಯನ್ನು ಪುರಸ್ಕರಿಸಲಾಗಿದೆ.

-ಎಚ್.ಕೆ.ಪಾಟೀಲ್, ಕಾನೂನು ಸಚಿವ.

--------------------------------------------------

‘ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3ರೂಪಾಯಿಗಳನ್ನು ಏರಿಕೆ ಮಾಡುವಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ’

-ಎಚ್.ಕೆ.ಪಾಟೀಲ್, ಕಾನೂನು ಸಚಿವ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News