ಮಂಗಳೂರು ಎಸ್ಇಝೆಡ್ ನಲ್ಲಿದ್ದ ಜೆಬಿಎಫ್ ಕಂಪನಿಯ ಬಿಕ್ಕಟ್ಟು; 34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ ಬಿ ಪಾಟೀಲ

Update: 2024-02-13 09:12 GMT

ಬೆಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಸಕ್ರಿಯವಾಗಿದ್ದ ಜೆಬಿಎಫ್ ಕಂಪನಿಯು ಆರ್ಥಿಕ ತೊಂದರೆಗೆ ಸಿಲುಕಿದ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ 34 ಉದ್ಯೋಗಿಗಳಿಗೆ `ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್’(ಗೈಲ್)ನಲ್ಲಿ ಉದ್ಯೋಗ ಕೊಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರದೊಂದಿಗೆ ನಿರಂತರವಾಗಿ ವ್ಯವಹರಿಸಲಾಗುತ್ತಿದೆ. ಜತೆಗೆ, ಗೈಲ್ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರು ಮಂಗಳವಾರ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವವರು ಜೆಬಿಎಫ್ ಕಂಪನಿಗೆ ಜಮೀನು ನೀಡಿ, ನಿರ್ವಸಿತರಾಗಿರುವವರು. ಸರಕಾರದ ನಿಯಮಗಳಂತೆ ಆ ಕಂಪನಿಯು ಇಂಥ 115 ಮಂದಿಗೆ ಉದ್ಯೋಗ ನೀಡಬೇಕಿತ್ತು. 2012ರಲ್ಲಿ 81 ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡ ಕಂಪನಿಯು 2017ರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಎನ್.ಸಿ.ಎಲ್.ಟಿ. ಪ್ರಕ್ರಿಯೆಯಡಿಯಲ್ಲಿ ಜೆಬಿಎಫ್ ಕಂಪನಿಯನ್ನು ಕೇಂದ್ರ ಸರಕಾರದ `ಗೈಲ್’ಗೆ ವಹಿಸಲಾಯಿತು. ಆ ಸಂಸ್ಥೆಯು ಇವರಿಗೆ 2023ರ ಮಾರ್ಚ್ ತನಕ ವೇತನ ನೀಡಿದೆ. ಆದರೆ, ನಂತರ ಅದು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ನಡೆಸಿ, ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿತು. ಇದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಅವರು ವಿವರಿಸಿದರು.

ನಿಯಮಾವಳಿಗಳ ಪ್ರಕಾರ, ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಅರ್ಹರಿಗೆ ಉದ್ಯೋಗ ನೀಡುವುದು ಕಡ್ಡಾಯವಾಗಿದೆ. ಈಗ ಸಂಕಷ್ಟಕ್ಕೆ ಸಿಲುಕಿರುವವರ ಬದುಕನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಎಸ್ಇಜೆಡ್ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, 2023ರ ನ.7ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ, ಇವರನ್ನೆಲ್ಲ ಉದ್ಯೋಗದಲ್ಲಿ ಮುಂದುವರಿಸಲು ಅಗತ್ಯ ಅನುಮೋದನೆ ಪಡೆದುಕೊಳ್ಳುವಂತೆ ಜಿಎಂಪಿಎಲ್ ಸಂಸ್ಥೆಯ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದು ಪಾಟೀಲ ತಿಳಿಸಿದರು.

ಮಿಕ್ಕಂತೆ, ಮಂಗಳೂರು ತಾಲ್ಲೂಕಿನ ಇಪಿಎಪಿ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 104.28 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರಗಳ ವತಿಯಿಂದ 50:50ರ ಅನುಪಾತದಲ್ಲಿ ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ಉತ್ತರಿಸಿದರು.

ಅಭಿನಂದನೆ ಸಲ್ಲಿಸಿದ ಭಂಡಾರಿ:

ಕೈಗಾರಿಕಾ ಸಚಿವ ಪಾಟೀಲ ಅವರು ದಾವೋಸ್ ನ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿ, ರಾಜ್ಯಕ್ಕೆ ಸುಮಾರು ₹23000 ಕೋಟಿ ಬಂಡವಾಳ ತರುವ ಪ್ರಯತ್ನ ಮಾಡಿದ್ದು ಅದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News