81,589 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ | ವರದಿ ಬಂದ ಕೂಡಲೇ ಪರಿಹಾರಕ್ಕೆ ಕ್ರಮ : ಸಿಎಂ ಸಿದ್ದರಾಮಯ್ಯ

Update: 2024-08-16 14:21 GMT

PC : x/@CMofKarnataka

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ 81,589 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ

ಶುಕ್ರವಾರ ನಗರದ ತಮ್ಮ ಗೃಹಕಚೇರಿ ಕೃಷ್ಣದಲ್ಲಿ ರಾಜ್ಯದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಒಟ್ಟು 67 ಸಾವು ಸಂಭವಿಸಿದ್ದು, 66 ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ ಎಂದರು.

ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಡಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಅಂಗನವಾಡಿ, ಶಾಲೆ ಕಟ್ಟಡಗಳ, ಸೇತುವೆಗಳು, ಕರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.

ರಾಜ್ಯದಲ್ಲಿ ಜೂ.1ರಿಂದ ಆಗಸ್ಟ್ 15ರವರೆಗೆ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆಯಾಗಿದ್ದು, ಚಾಮರಾಜನಗರ, ಮಂಡ್ಯ, ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಿರುಗುಪ್ಪ, ದೇವದುರ್ಗ, ಔರಾದ್, ಬೀದರ್, ಕಮಲಾನಗರ, ಹುಬ್ಬಳ್ಳಿ, ಶಹಾಪುರ, ಯಾದಗಿರಿ ಮೊದಲಾದ ಒಂಬತ್ತು ತಾಲ್ಲೂಕುಗಳಲ್ಲಿ ಈಗ ಕಡಿಮೆ ಮಳೆ ಇದೆ. ಆದರೆ, ಈ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗುವುದಾಗಿ ಮುನ್ಸೂಚನೆಯಿದೆ. ರಾಜ್ಯಾದ್ಯಂತ 82 ಲಕ್ಷ ಹೆಕ್ಟೇರ್ ಗುರಿಗೆ ಎದುರಾಗಿ 70 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಮುಂಗಾರು ಪೂರ್ವ ಬಿತ್ತನೆ ಆಗಿರುವ ಉದ್ದು ಮತ್ತು ಹೆಸರು ಕಟಾವಿಗೆ ಬಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ಜಲಾಶಯಗಳು ಒಟ್ಟು ಶೇ.89ರಷ್ಟು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕೆರೆಗಳನ್ನು ತುಂಬಿಸುವಂತೆ ಹಾಗೂ ಮಳೆ ಮುನ್ಸೂಚನೆ ಆಧರಿಸಿ, ಮುಂಚಿತವಾಗಿಯೇ ಸೂಕ್ತ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರಗೆ ಬಿಡುವ ಮೂಲಕ, ಮಳೆಯಾದಾಗ ಜಲಾಶಯಗಳಲ್ಲಿ ಏಕಾಏಕಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವುದನ್ನು ತಡೆಗಟ್ಟಲು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸೇತುವೆಗಳ ಫಿಟ್‍ನೆಸ್‍ಗಳ ಬಗ್ಗೆ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕು. ಸಂಪರ್ಕ ರಸ್ತೆಗಳು ಕುಸಿದಿದ್ದರೆ ಅವುಗಳನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಎಲ್ಲಾ ಸೇತುವೆ, ರಸ್ತೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮುಳುಗು ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸಂಚರಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಕ್ರಿಯಾ ಯೋಜನೆಯಲ್ಲಿ ಆದ್ಯತೆ ಮೇರೆಗೆ ದುರಸ್ತಿ ಪಡಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಪಂಚಾಯತ್ ಮಟ್ಟದಲ್ಲಿರುವ ಟಾಸ್ಕ್ ಫೋರ್ಸ್ ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಮನೆ ಕುಸಿತ, ನೀರಿನಲ್ಲಿ ಕೊಚ್ಚಿ ಹೋಗುವಂತಹ ಪ್ರಕರಣಗಳಲ್ಲಿ ಸಾವು ನೋವು ತಪ್ಪಿಸಲು ಸಾಧ್ಯವಿದೆ. ಶಿಥಿಲವಾದ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮ ಮಟ್ಟದಲ್ಲಿ ಮೊದಲೇ ಗುರುತಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಉಮಾ ಮಹಾದೇವನ್ ಹಾಗೂ ಸರಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಮುಂದಿನ ನಾಲ್ಕು ವಾರಗಳಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ, ಮಲೆನಾಡಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News