ಸಿನಿಮಾ ಚಿತ್ರೀಕರಣಕ್ಕಾಗಿ ಮರಗಳ ಕಡಿತಲೆ | ಪ್ರಕರಣ ದಾಖಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

Update: 2024-10-29 13:57 GMT

ಈಶ್ವರ್ ಖಂಡ್ರೆ

ಬೆಂಗಳೂರು : ಅರಣ್ಯ ಭೂಮಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನೂರಾರು ಮರ ಗಿಡಗಳನ್ನು ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಾಗೂ ಅನುಮತಿ ಇಲ್ಲದೆ ಮರಗಳ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಎಚ್.ಎಂ.ಟಿ ತನ್ನ ವಶದಲ್ಲಿರುವ ಅರಣ್ಯ ಭೂಮಿಯನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಕೆನರಾ ಬ್ಯಾಂಕ್‍ಗೆ ಎಚ್.ಎಂ.ಟಿ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರಕ್ಕಾಗಿ ಹಲವು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿದೆ. ಇದಕ್ಕಾಗಿ ಇಲ್ಲಿದ್ದ ನೂರಾರು ಮರ ಗಿಡ ಕಡಿಯಲಾಗಿದೆ. ನಿಯಮಾನುಸಾರ ಅನುಮತಿ ಇಲ್ಲದೆ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಗಿಡಗಳ ಅಕ್ರಮ ಕಡಿತಲೆ ದಂಡನೀಯ ಅಪರಾಧ ಆಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು, ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ? ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿತಲೆಗೆ ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಅನುಮತಿ ಇಲ್ಲದೆ ಮರ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಅವರು ಸೂಚನೆ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News