‘ಸೈಬರ್ ಸುರಕ್ಷತೆ-ಡಿಜಿಟಲ್ ಸಂವಹನ ಕುರಿತು ಜಾಗೃತಿ’: ಟ್ರೂ ಕಾಲರ್ ನೊಂದಿಗೆ ರಾಜ್ಯ ಸರಕಾರ ಒಪ್ಪಂದ

Update: 2024-02-05 14:23 GMT

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರವು ಸೋಮವಾರ ಕಾಲರ್ ಐಡಿ ಮತ್ತು ಸ್ಪ್ಯಾಮ್ ನಿರ್ಬಂಧಿಸುವ ಅಪ್ಲಿಕೇಶನ್ ಟ್ರೂಕಾಲರ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ನಾಗರಿಕರಿಗೆ ಡಿಜಿಟಲ್ ಸುರಕ್ಷತೆ ನೀಡಲು ಸಹಾಯ ಮಾಡಲಿದೆ.

ಈ ಸಹಯೋಗದ ಅಡಿಯಲ್ಲಿ, ರಾಜ್ಯದ ನಾಗರಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಟ್ರೂಕಾಲರ್ ಉಪಕ್ರಮಗಳ ಸರಣಿ ನಡೆಸಲಿದೆ. ಸಮಗ್ರ ಅಭಿಯಾನವು ಪ್ರಾಯೋಗಿಕ ಸಲಹೆಗಳೊಂದಿಗೆ ಆನ್‍ಲೈನ್ ಸುರಕ್ಷತಾ ಜಾಗೃತಿ ಮೂಡಿಸಲಿದೆ, ಈ ಮೂಲಕ ನಾಗರಿಕರನ್ನು ಡಿಜಿಟಲ್ ವಂಚನೆಗೆ ಒಳಗಾಗದಂತೆ ತಡೆಯಲಿದೆ.

ಇದು ಅವರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಡಿಜಿಟಲ್ ಸಂವಹನ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಡಿಜಿಟಲ್ ಸಂವಹನಗಳ ಬಳಕೆಗಳ ಬಗ್ಗೆ ಹಾಗೂ ವಂಚನೆಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಟ್ರೂಕಾಲರ್ ಕನ್ನಡದಲ್ಲಿಯೂ ತರಬೇತಿ ನೀಡಲಿದೆ.

ಒಪ್ಪಂದಕ್ಕೆ ಸಹಿ ಹಾಕಿ ಬಳಿಕ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಪಾಲುದಾರಿಕೆಯು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ನಮ್ಮ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುವ ರಾಜ್ಯ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಸೈಬರ್ ಅಪರಾಧಗಳು ಮತ್ತು ವಂಚನೆಯು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ.‌ ಹೀಗಾಗಿ ಅಮಾಯಕ ನಾಗರಿಕರು ಈ ವಂಚನೆಗೆ ಒಳಗಾಗದಂತೆ ತಪ್ಪಿಸಲು ಈ ಒಪ್ಪಂದ ಅನಿವಾರ್ಯವಾಗಿದೆ ಎಂದರು.

ಡಿಜಿಟಲ್ ಸಂವಹನದಲ್ಲಿ ಜಾಗೃತಿ ಹೆಚ್ಚಿಸಲು ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸರಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಂಗಳೂರು ನಾವೀನ್ಯತೆಗೆ ಸಮಾನಾರ್ಥಕವಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಟೆಕ್ ಹಬ್ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ನಾಗರಿಕರ ಆನ್‍ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿ ವಿಧಾನವನ್ನು ಅಳವಡಿಸಿಕೊಳ್ಳಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು.

ಈ ಕುರಿತು ಮಾತನಾಡಿದ ಟ್ರೂಕಾಲರ್ ಇಂಡಿಯಾದ ಮುಖ್ಯ ಉತ್ಪನ್ನ ಅಧಿಕಾರಿ ಮತ್ತು ರಿಷಿತ್ ಜುಂಜುನ್‍ವಾಲಾ, ಸಂವಹನದಲ್ಲಿ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ರಾಜ್ಯ ಸರಕಾರದೊಂದಿಗೆ ಸಹಕರಿಸಲು ನಾವು ಸಂತೋಷಪಡುತ್ತೇವೆ. ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ನಾಗರಿಕರಿಗೆ ಅಧಿಕಾರ ನೀಡುತ್ತೇವೆ. ಟ್ರೂ ಕಾಲರ್ ನಲ್ಲಿ, ನಾವು ವಂಚನೆ ತಡೆಗಟ್ಟುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸತತವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಸಹಯೋಗವು ರಾಜ್ಯದ ನಾಗರಿಕರಿಗೆ ವಂಚಕರಿಂದ ಒಂದು ಹೆಜ್ಜೆ ಮುಂದೆ ಇರಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News