ಕಾನೂನು ಕೈಗೆತ್ತಿಕೊಂಡು ಆಸ್ತಿ-ಪಾಸ್ತಿ ಹಾನಿ ಸಹಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-12-28 13:51 GMT

ಬೆಂಗಳೂರು: ‘ನಾವೆಲ್ಲರೂ ಕನ್ನಡ ಉಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲೆ ಗೌರವವಿದೆ. ಹಾಗಂತ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸರಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿನ ಸದಾಶಿವನಗರ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇದರಿಂದ ಕರ್ನಾಟಕದ ಗೌರವ, ಘನತೆಗೆ ಧಕ್ಕೆಯಾಗುತ್ತದೆ. ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ, ಶೇ.60ರಷ್ಟು ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ’ ಎಂದು ಎಚ್ಚರಿಸಿದರು.

‘ಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸಲ್ಲ ಎಂದು ಪೊಲೀಸ್ ಅಧಿಕಾರಿಗಳ ಜತೆ ನಾನೇ ಮಾತನಾಡಿದ್ದೆ. ಕನ್ನಡ ಕಡ್ಡಾಯ ಮಾಡಲು ನೋಟೀಸ್ ನೀಡೋಣ. ಆದರೆ, ಕಾನೂನು ಕೈಗೆತ್ತಿಕೊಳ್ಳಬಾರದು. ನಾರಾಯಣಗೌಡರಿಗೆ ಈ ಮಾತನ್ನು ಇವತ್ತೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರತಿಭಟನೆ ಮಾಡಲಿ, ಧಿಕ್ಕಾರ ಕೂಗಲಿ. ನಾವು ತಪ್ಪು ಮಾಡಿದರೆ ನಮ್ಮ ಮನೆ ಮುಂದೆಯೂ ಬಂದು ಪ್ರತಿಭಟನೆ ಮಾಡಲಿ. ನಾವೂ ಕನ್ನಡಿಗರೇ. ಕನ್ನಡದ ಬಗ್ಗೆ ನಮಗೂ ಬದ್ಧತೆ ಇದೆ. ಸಂಪುಟದಲ್ಲಿ ನಿಮ್ಮ ಟಿಪ್ಪಣಿಗಳೇನೆ ಇದ್ದರೂ ಕನ್ನಡದಲ್ಲೇ ಇರಬೇಕು ಎಂದು ಮುಖ್ಯಮಂತ್ರಿ, ಸಚಿವರುಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

‘ನಮ್ಮ ಸರಕಾರ ಅಧಿಕಾರಕ್ಕೆ ಬರಲು ಕನ್ನಡಪರ ಹೋರಾಟಗಾರರ ಸಹಕಾರ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಏನು ಬೇಕಾದರೂ ಮಾಡಲಿ. ಅವರು ತಪ್ಪು ಮಾಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ. ಅನೇಕರು ಇಲ್ಲಿ ಬಂದು ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊರಗಡೆಯಿಂದ ಬಂದವರು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ಕನ್ನಡ ಬಳಕೆ ಬಗ್ಗೆ ಹೇಳೋಣ. ಹಾಗೆಂದು ಅವರನ್ನು ಬೆದರಿಸಲು ಅವಕಾಶವಿಲ್ಲ. ಯಾರು ಕನ್ನಡ ನಾಮಫಲಕ ಹಾಕಿಲ್ಲ ಅವರಿಗೆ ನಾವು ನೊಟೀಸ್ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

‘ಅಂಗಡಿ ಮುಂಗಟ್ಟುಗಳು ಸೇರಿ ಎಲ್ಲ ವ್ಯಾಪಾರಿಗಳು ಸರಕಾರದ ಆದೇಶ ಪಾಲನೆ ಮಾಡಬೇಕು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸಬೇಕು. ಸರಕಾರ ನಿಮ್ಮ ಹಾಗೂ ನಿಮ್ಮ ಹಿತಾಸಕ್ತಿ ಕಾಯಲು ಬದ್ಧ’

ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News