ಬೆಂಗಳೂರು | ಯಾರೇ ವಿರೋಧ ಮಾಡಿದರೂ ನೀರಿನ ದರ ಏರಿಕೆ ಅನಿವಾರ್ಯ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: “ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಆದರೂ ಬಿಡಬ್ಲ್ಯೂ ಎಸ್ ಎಸ್ ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ ಅನಿವಾರ್ಯ. ಅದನ್ನು ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ” ಅಭಿಯಾನಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಮಾತನಾಡಿದರು.
“ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇ ಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೇ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಚರ್ಚೆ ಮಾಡಲಿ. ಧರಣಿ ಮಾಡಲಿ ನಾನು ಇದಕ್ಕೆ ಬದ್ಧವಾಗಿದ್ದೇನೆ” ಎಂದು ಹೇಳಿದರು.
ಇಲಾಖೆಗೆ ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ :
“14 ವರ್ಷಗಳಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದ್ದೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ನೀವೇ ಸೋಲಾರ್ ಸೇರಿದಂತೆ ಇತರೇ ಮೂಲಗಳಿಂದ ವಿದ್ಯುತ್ ತಯಾರಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ ಕಾರಣಕ್ಕೆ ಮೂರುವರೆ ರೂಪಾಯಿಗೆ ವಿದ್ಯುತ್ ಸಿಗುತ್ತಿದೆ. ಆಗ ಹಲವರು ತಲೆಕೆಟ್ಟಿದೆಯಾ ಎಂದು ಆಡಿಕೊಂಡರು. ಇದರಿಂದ ಸರಬರಾಜು ಮಾಡುವ ಖರ್ಚು ಉಳಿತಾಯವಾಗಿದೆ” ಎಂದು ಹೇಳಿದರು.
ಮೇಕೆದಾಟು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ:
“ನಾನು ಅಧಿಕಾರವಹಿಸಿಕೊಂಡ ತಕ್ಷಣ 6 ಎಂಎಲ್ ಡಿ ನೀರು ಸರಬರಾಜನ್ನು ಹೆಚ್ಚಳ ಮಾಡಲಾಗಿದೆ. ತಮಿಳುನಾಡಿಗೆ ನಿಗದಿತ ನೀರಿಗಿಂತ 100 ಟಿಎಂಸಿ ಹೆಚ್ಚುವರಿ ಕಾವೇರಿ ನೀರನ್ನು ಹರಿಸಲಾಗಿದೆ. ನಮ್ಮಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ನಮ್ಮಲ್ಲಿ ಮತ್ತೊಂದು ಅಣೆಕಟ್ಟು ಇದ್ದಿದ್ದರೆ ಅವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ” ಎಂದರು.
“ಕೆಆರ್ ಎಸ್ ಯಿಂದಲೇ ನೇರವಾಗಿ ನಗರಕ್ಕೆ ನಿಗದಿಯಾದ ನೀರನ್ನು ತರಬಹುದು ಎಂದು ಒಂದಷ್ಟು ಜನ ವರದಿ ಕೊಟ್ಟಿದ್ದಾರೆ. ಶರಾವತಿಯಿಂದ ನೀರು ತರಬೇಕು ಎನ್ನುವ ಆಲೋಚನೆಯಿದೆ. ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ರಾಜಕಾರಣದಿಂದ ಅಲ್ಲಲ್ಲಿ ಬೇರೆ, ಬೇರೆ ಕಡೆ ತಿರುವು ಪಡೆದುಕೊಂಡಿದೆ. ಇದನ್ನೂ ಸಹ ಒಂದು ಹಂತಕ್ಕೆ ತಲುಪಿಸಿದ್ದೇನೆ. ಕಾವೇರಿ 5 ನೇ ಹಂತದ ಕಾಮಗಾರಿಗೆ ನಿಂತಿದ್ದು ಮತ್ತೆ ಚಾಲನೆ ಮಾಡಲಾಗುವುದು” ಎಂದು ತಿಳಿಸಿದರು.
“ಕಾಲುವೆಗಳಲ್ಲಿ ನೀರನ್ನು ಕೊನೆಯ ಹಂತಕ್ಕೆ ತಲುಪಿಸಬೇಕು ಎಂದು ಕಾಲುವೆಗಳ ಅಕ್ಕ ಪಕ್ಕ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಬೋರ್ ವೆಲ್ ಗಳನ್ನು ಹಾಕುವಂತಿಲ್ಲ ಹಾಗೂ ಪಂಪ್ ಮೂಲಕ ನೀರನ್ನು ಎತ್ತುವಂತಿಲ್ಲ ಎನ್ನುವ ಕಾನೂನು ತರಲಾಗಿದೆ” ಎಂದು ಹೇಳಿದರು.
ರಾಜ್ಯಪಾಲರ ಮೇಲೆ ಬಿಜೆಪಿ, ದಳದವರೇ ಕಲ್ಲು ಎಸೆಯಬಹುದು :
ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಕಾಂಗ್ರೆಸ್ ಕಾರಣ ಎನ್ನುವ ಬಗ್ಗೆ ಕೇಳಿದಾಗ “ಬಿಜೆಪಿ, ದಳದ ಕಿಡಿಗೇಡಿಗಳು ಕಲ್ಲು ಹೊಡಯಬಹುದು ಎನ್ನುವ ಕಾರಣಕ್ಕೆ ಪೊಲೀಸ್ ರಾಜ್ಯಪಾಲರ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ, ದಳ ಪ್ರಯತ್ನಿಸುತ್ತಿದೆ ಎನ್ನುವ ಮಾಹಿತಿ ನಮಗಿದೆ. ನಮಗೆ ರಾಜ್ಯಪಾಲರ ಮೇಲೆ ಗೌರವವಿದೆ. ಆದ ಕಾರಣ ಅವರಿಗೆ ರಕ್ಷಣೆ ನೀಡಲಾಗಿದೆ” ಎಂದರು.