ʼಶಕ್ತಿʼ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು: "ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ತಿರುಚಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾನಾಡಿದ ಅವರು, ʼಶಕ್ತಿ ಯೋಜನೆ ಪರಿಷ್ಕರಣೆ ಕುರಿತ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆರ್ಥಿಕವಾಗಿ ಸದೃಢವಾಗಿರುವವರು, ಐಟಿಬಿಟಿ ಸಂಸ್ಥೆಗಳವರು, ಎಂಎನ್ ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ" ಎಂದು ತಿಳಿಸಿದರು.
"ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವೇ? ಅವರ ಸಂಖ್ಯೆ ಶೇಕಡಾ 7-8ರಷ್ಟು ಇರಬಹುದು. ಹಿಂದೆ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸ್ವಇಚ್ಛೆಯಿಂದ ಸಬ್ಸಿಡಿ ತ್ಯಜಿಸುವವರಿಗೆ ಅವಕಾಶ ನೀಡಿದರು. ಆ ರೀತಿ ಆಲೋಚನೆ ಮಾಡುವುದಾಗಿ ಹೇಳಿದ್ದೇನೆ. ಕಾಂಗ್ರೆಸ್ ಅಧ್ಯಕ್ಷನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ. ಐದೂ ಗ್ಯಾರಂಟಿ ಯೋಜನೆ ಮುಂದುವರಿಯುತ್ತವೆ. ಜನರಿಗೆ ಈ ಸೌಲಭ್ಯ ಮುಂದುವರಿಯಲಿದೆ. ಬೆಲೆ ಏರಿಕೆ ಸಮಸ್ಯೆ ನಿವಾರಿಸಿ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಜನ ನಮಗೆ ಆಶೀರ್ವಾದ ಮಾಡುತ್ತಾರೆ. ಈಗಿನ ಅವಧಿ ಜತೆಗೆ ಮುಂದಿನ ಐದು ವರ್ಷದ ಅವಧಿಯೂ ಸೇರಿ ಒಟ್ಟು ಎಂಟೂವರೆ ವರ್ಷ ಈ ಯೋಜನೆ ಮುಂದುವರಿಯಲಿದೆ" ಎಂದು ತಿಳಿಸಿದರು.
ಅಸೂಯೆಯಿಂದ ಎಚ್‌ಡಿಕೆ ಟೀಕೆ:
ರಾಜ್ಯ ಸರಕಾರ ದಿವಾಳಿಯಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದಲೇ ಸರಕಾರ ಪತನವಾಗಲಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, "ಈ ಗ್ಯಾರಂಟಿ ಯೋಜನೆಗಳನ್ನು ಕಂಡು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ನವರು 5 ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ. ನಿಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಒಂದು ಯೋಜನೆ ಕೊಟ್ಟಿಲ್ಲ, ಬಡವರಿಗೆ ನಿವೇಶನ ಕೊಟ್ಟಿಲ್ಲ, ಊರು ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಯಾಕೆ ಮತ ಕೇಳುತ್ತೀರಿ ಎಂದು ಜನ ಅವರನ್ನು ಧಿಕ್ಕರಿಸುತ್ತಿದ್ದಾರೆ. ಅದನ್ನು ಸಹಿಸಲಾಗದೆ ನನಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ಕುಮಾರಸ್ವಾಮಿ ಅಸೂಯೆಯಿಂದ ತಮ್ಮ ಕೈ ಹಿಸುಕಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.
ಬಿಜೆಪಿಗೆ ರಾಜಕೀಯ ಮಾಡಲು ಬೇರೆ ವಿಚಾರ ಇಲ್ಲ:
ಸರಕಾರದ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ವಕ್ಫ್ ವಿಚಾರದಲ್ಲಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, "ನಮ್ಮ ಸರಕಾರದ ವಿರುದ್ಧ ಟೀಕೆ ಮಾಡಲು ಬಿಜೆಪಿಯವರ ಬಳಿ ವಿಚಾರಗಳಿಲ್ಲ. ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಕಾಲದಲ್ಲೇ ಮೊದಲು ನೋಟೀಸ್ ನೀಡಲಾಗಿದೆ. ಕೋಮು ಗಲಭೆ ಸೃಷ್ಟಿಸಿ, ದೇಶ ಹಾಗೂ ರಾಜ್ಯ ಒಡೆಯಬೇಕು ಎಂಬುದು ಅವರ ಉದ್ದೇಶ" ಎಂದು ತಿಳಿಸಿದರು.