ʼಗ್ಯಾರಂಟಿʼ ಯೋಜನೆಗಳು ನಿಲ್ಲುವುದಿಲ್ಲ, ಪ್ರಧಾನಿ ಮೋದಿಯನ್ನು ಅವರದೇ ಕಚೇರಿ ದಾರಿತಪ್ಪಿಸಿದೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : "ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಹಿಂದಕ್ಕೆ ಪಡೆಯುತ್ತದೆ ಎಂದು ಮೋದಿ ಅವರನ್ನು ಪ್ರಧಾನಮಂತ್ರಿ ಕಚೇರಿ ದಾರಿ ತಪ್ಪಿಸಿದೆ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಗಳ ವಿರುದ್ಧ ಪ್ರಧಾನಿ ಮೋದಿ ಅವರ ಎಕ್ಸ್ (ಟ್ವೀಟ್) ಬಗ್ಗೆ ಕೇಳಿದ ಪ್ರಶ್ನೆಗೆ, "ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ನೀಡಿದ ಯಾವುದೇ ಯೋಜನೆಗಳನ್ನು ಹಿಂದಕ್ಕೆ ಪಡೆದ ಇತಿಹಾಸವಿಲ್ಲ. ಉಳುವವನಿಗೆ ಭೂಮಿ, ಪಿಂಚಣಿ ಯೋಜನೆ, ನರೇಗಾ ಸೇರಿದಂತೆ ಅನೇಕ ಯೋಜನೆಗಳು ಈಗಲೂ ಚಾಲ್ತಿಯಲ್ಲಿವೆ" ಎಂದರು.
"ಬಿಜೆಪಿಯಿಂದ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಕೆಟ್ಟ ರಾಜಕೀಯ ಗಿಮಿಕ್ ನಡೆಯುತ್ತಿದೆ. ದೇಶದ ಉನ್ನತ ಕಚೇರಿಯು ಇಂತಹ ಸುಳ್ಳು ಹರಡಬಾರದು. ಬಿಜೆಪಿಯು ಅನೇಕ ರಾಜ್ಯಗಳಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದೆ" ಎಂದು ತಿರುಗೇಟು ನೀಡಿದರು.