ವಿಧಾನಸೌಧವನ್ನೇ ನೋಡದ ಹಲವು ಸಾಧಕರನ್ನು ನಮ್ಮ ಸರಕಾರ ಗುರುತಿಸಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-11-01 17:13 GMT

ಬೆಂಗಳೂರು : ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಲ್ಲಿ ಹಲವರು ಇಂದಿಗೂ ವಿಧಾನಸೌಧವನ್ನೇ ನೋಡಿಲ್ಲ. ಅಂತಹ ತೆರೆಮರೆಯ ಸಾಧಕರನ್ನು ಗುರುತಿಸಿ ನಮ್ಮ ಸರಕಾರ ಗೌರವಿಸುವ ಕೆಲಸ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧ ಮುಂಭಾಗದ ಬೃಹತ್ ಮೆಟ್ಟಿಲುಗಳ ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ-2024 ಮತ್ತು ಕರ್ನಾಟಕ ಸಂಭ್ರಮ-50ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಬಳಿಕ ಅವರು ಮಾತನಾಡಿದರು.

ನಮ್ಮ ಆಯ್ಕೆ ಸಮಿತಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಹೆಕ್ಕಿ ಬೆಳಕಿಗೆ ತರುವ ಕೆಲಸವನ್ನು ಮಾಡಿದೆ. ಮನುಷ್ಯನಿಗೆ ಹುಟ್ಟು ಉಚಿತ, ಸಾವು ಖಚಿತ ಆದರೆ, ಈ ಎರಡರ ನಡುವಿನ ಜೀವನದಲ್ಲಿ ನಾವು ಸಾಧನೆಯ ಗುರುತನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಪ್ರಶಸ್ತಿ ಪಡೆದಿರುವ ಎಲ್ಲ ಸಾಧಕರ ಸೇವೆ ಮಹತ್ವವಾದದ್ದು, ಅದರ ಕಾರ್ಯ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ನಡೆಯದ ಬಹಳ ಅಪರೂಪದ ಕಾರ್ಯಕ್ರಮ ಇದಾಗಿದೆ. ಸುವರ್ಣ ಸಂಭ್ರಮವನ್ನು ಆಯೋಜಿಸಿ 100 ಸಾಧಕರನ್ನು ಹುಡುಕಿ ಗೌರವಿಸುವುದು ಸುಲಭದ ಮಾತಲ್ಲ. ಅದನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಂದಾಳತ್ವದ ಸರಕಾರ ಮಾಡಿರುವುದು ಶ್ಲಾಘನೀಯ. ನನ್ನನ್ನು ಒಳಗೊಂಡಂತೆ ಎಲ್ಲ ಪ್ರಶಸ್ತಿ ಪುರಸ್ಕೃತರಿಗೂ ಅವಿಸ್ಮರಣೀಯ ಕ್ಷಣಗಳನ್ನು ನೀಡಿದ ಸರಕಾರಕ್ಕೆ ಧನ್ಯವಾದಗಳು ಎಂದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News