ʼಗ್ಯಾರಂಟಿʼ ನಿಲ್ಲಿಸಲು ಬಿಜೆಪಿ ಷಡ್ಯಂತ್ರ, ಜನ ಜಾಗೃತರಾಗಿರುವಂತೆ ದೇವೇಗೌಡರು ಸಂದೇಶ ನೀಡಿದ್ದಾರೆ : ಡಿಕೆಶಿ ತಿರುಗೇಟು
ಬೆಂಗಳೂರು :“ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡರು ಸಂದೇಶ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಸೋಮವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ನಮ್ಮ ತಾಯಂದಿರ ಬದುಕು ಹಾಗೂ ಸಂಸಾರ ಉತ್ತಮವಾಗಿ ಸಾಗಲಿ ಎಂದು ನಾವು ಗೃಹಲಕ್ಷ್ಮಿ ಹಣ ನೀಡುತ್ತಿದ್ದೇವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಹೊರಟಿದೆ. ಜನ ಹುಷಾರಾಗಿರಬೇಕು" ಎಂದು ತಿಳಿಸಿದರು.
ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ:
"ರಾಜ್ಯದ ಜನ ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತವನ್ನು ಒಪ್ಪಿದ್ದು, ಈ ಬಾರಿ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಲ್ಲಿ ಪ್ರಚಾರ ಮುಗಿಸಿದ್ದೇವೆ. ಬಿಜೆಪಿ ಏನೇ ತಂತ್ರ ಪ್ರಯೋಗಿಸಿದರೂ ಜನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದಂತೆ ಈ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಮತ ಹಾಕಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿಗಳ ದಾರಿತಪ್ಪಿಸಿದ್ದಾರೆ :
ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ವಸೂಲಿ ಬಗ್ಗೆ ಪ್ರಧಾನಿಗಳ ಆರೋಪದ ಬಗ್ಗೆ ಕೇಳಿದಾಗ, "ಇದು ಸುಳ್ಳು ಆರೋಪ, ಅವರನ್ನು ಯಾರೋ ದಾರಿತಪ್ಪಿಸಿದ್ದಾರೆ. ಈ ವಿಚಾರವಾಗಿ ಆರೋಪ ಸಾಬೀತುಪಡಿಸಿದರೆ, ರಾಜಕೀಯ ತ್ಯಜಿಸುವುದಾಗಿ ಮುಖ್ಯಮಂತ್ರಿಗಳು ಬಹಿರಂಗ ಸವಾಲು ಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು?" ಎಂದು ಹೇಳಿದರು.