ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ಈಡಿ ಪತ್ರ ವಿಚಾರ : ಡಿಸಿಎಂ ಡಿಕೆಶಿ ಹೇಳಿದ್ದೇನು?
ಬೆಂಗಳೂರು: ಮುಡಾ ಪ್ರಕರಣ ವಿಚಾರವಾಗಿ ಲೋಕಾಯುಕ್ತಕ್ಕೆ ಈಡಿ ಪತ್ರ ಬರೆದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, "ಯಾವುದೇ ತನಿಖೆ ನಡೆದರೂ ಅದು ಗೌಪ್ಯವಾಗಿರಬೇಕು. ಏನಾದರೂ ಸತ್ಯಾಂಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ಬದಲು ಮಾಧ್ಯಮಗಳಿಗೆ ನೀಡುತ್ತಾರೆ ಎಂದರೆ, ಅವರು ಈ ವಿಚಾರದಲ್ಲಿ ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ" ಎಂದು ಹೇಳಿದರು.
ಬುಧವಾರ ನಗರದಲ್ಲಿ ಮಾಧ್ಯಮಾದವರೊಂದಿಗೆ ಮಾತನಾಡಿದ ಅವರು, "ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸಾಬೀತಾಗುತ್ತಿದೆ. ಆದರೂ ಚಿಂತೆ ಇಲ್ಲ. ನಮ್ಮ ಸರಕಾರ ಹಾಗೂ ಪಕ್ಷ ಹೋರಾಟ ಮಾಡುತ್ತದೆ. ನಮಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ” ಎಂದು ತಿಳಿಸಿದರು.
ಒಂದು ತನಿಖಾ ಸಂಸ್ಥೆ ಮತ್ತೊಂದು ತನಿಖಾ ಸಂಸ್ಥೆ ಮೇಲೆ ಪ್ರಭಾವ ಬೀರುತ್ತಿಲ್ಲವೇ ಎಂದು ಕೇಳಿದಾಗ, “ನನ್ನ ಮೇಲೂ ಈಡಿಯವರು ವಿಚಾರಣೆ ಮಾಡಿ, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಆದರಿಸಿ ಕೋರ್ಟ್ ಏನೋ ಒಂದು ತೀರ್ಪನ್ನು ಕೊಟ್ಟಿದೆ. ಈ ಪ್ರಕರಣದಲ್ಲಿ ದುಡ್ಡು ತೆಗೆದುಕೊಳ್ಳೋದು, ಕೊಡೋದು ನಡೆದಿಲ್ಲ. ರೇಡ್ ಮಾಡಿದಾಗ ಹಣ ಸಿಕ್ಕಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮನಿ ಎಲ್ಲಿ ಲಾಂಡರಿಂಗ್ ಆಯ್ತು? ಈ ಪ್ರಕರಣ ಆಡಳಿತ ವಿಚಾರವಾಗಿದೆ. ಆಡಳಿತ ವಿಭಾಗವನ್ನು ಅವರು ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ತನಿಖಾ ಸಂಸ್ಥೆ ಮಾಧ್ಯಮಗಳಿಗೆ ಈ ವಿಚಾರ ಸೋರಿಕೆ ಮಾಡಿದರೆ ಹೇಗೆ? ಒಂದು ತನಿಖಾ ಸಂಸ್ಥೆ, ಮತ್ತೊಂದು ತನಿಖಾ ಸಂಸ್ಥೆಗೆ ನೀವು ಹೀಗೆ ಮಾಡಿ ಅಂತ ಹೇಳೋದನ್ನು ಹೊಸದಾಗಿ ನೋಡುತ್ತಿದ್ದೇನೆ. ನನ್ನ ಅನುಭವದಲ್ಲಿ ಇದೆನ್ನೆಲ್ಲ ಹೊಸದಾಗಿ ನೋಡುತ್ತಿದ್ದೇನೆ. ಇದಕ್ಕೆ ಜನ ಉತ್ತರ ಕೊಡುತ್ತಾರೆ, ನಾವೂ ಉತ್ತರ ಕೊಡುತ್ತೇವೆ” ಎಂದು ತಿಳಿಸಿದರು.
ಸಿಎಂ ಹೇಳಿದ್ದೇ ಅಂತಿಮ, ಅದರ ಬಗ್ಗೆ ಮರುಪ್ರಶ್ನೆ ಇಲ್ಲ :
ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಸಿಎಂ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠನಾಗಿರುತ್ತೇನೆ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ" ಎಂದರು.
ಸಮಾವೇಶಕ್ಕೆ ಯಾರೇ ಬಂದರೂ ಸಂತೋಷ :
ಹಾಸನದ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಿನ ಜನ ಬರುತ್ತಾರೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರು ಬರಲಿ. ಎಲ್ಲಾ ವರ್ಗದ ಜನ ಬೆಂಬಲದಿಂದಾಗಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ನಾವು ಈ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಈ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಸಲಾಗುತ್ತಿದೆ” ಎಂದು ತಿಳಿಸಿದರು.