ನಿರ್ಮಲಾ ಸೀತಾರಾಮನ್ ಎನ್.ಡಿ.ಎ ಸರಕಾರ ಉಳಿಸಿಕೊಳ್ಳುವ ಬಜೆಟ್ ಮಂಡಿಸಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-07-23 17:24 GMT

ಬೆಂಗಳೂರು : “ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್ ಡಿಎ ಸರಕಾರ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಯಾವುದೇ ನೆರವು ನೀಡದೆ ಅವರ ಮೇಲಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೇಂದ್ರ ಬಜೆಟ್ ವಿಚಾರವಾಗಿ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್. ಈ ಬಜೆಟ್ ನಲ್ಲಿ ಕೇಂದ್ರ ಸರಕಾರ ದೇಶವನ್ನು ಒಂದಾಗಿ ನೋಡಿಲ್ಲ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಇದು ಕೇವಲ ಬಿಜೆಪಿ ಹಾಗೂ ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ನೆರವು ನೀಡುವ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದೆ. ಇದು ಖಂಡನೀಯ” ಎಂದು ಟೀಕಿಸಿದರು.

“ಪ್ರಧಾನಮಂತ್ರಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ನಾನು ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದೆ. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಿ ಜಾಗತಿಕ ಮಟ್ಟದಲ್ಲಿ ತನ್ನದೇ ಚಾಪು ಮೂಡಿಸಿದೆ. ಹೀಗಾಗಿ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಮೂಲಸೌಕರ್ಯ ನೆರವು ಹಾಗೂ ಕರ್ನಾಟಕಕ್ಕೆ ಸಹಾಯ ಮಾಡುವ ಭರವಸೆ ಇಟ್ಟುಕೊಂಡಿದ್ದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದು, ತಮ್ಮ ರಾಜ್ಯಕ್ಕೆ ಆದ್ಯತೆ ನೀಡುತ್ತಾರೆ. ಕರ್ನಾಟಕದ ಹಿತ ರಕ್ಷಣೆ ಮಾಡುತ್ತಾರೆ, ಬಾಕಿ ಇರುವ ಯೋಜನೆಗಳಿಗೆ ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ತಾರತಮ್ಯದ ಬಜೆಟ್: ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕದ ಹಲವು ಬೇಡಿಕೆಗಳಿಗೆ ಕೇಂದ್ರ ಬಜೆಟ್ ಸ್ಪಂದಿಸಿಲ್ಲ. ತಾವು ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದ್ದೇವೆಂಬುದನ್ನೆ ಮರೆತಂತೆ ಕಾಣುತ್ತಿದೆ. ಎಸ್‌ಸಿ-ಎಸ್‌ಟಿ ವರ್ಗಗಳ ಕುರಿತು ಎಲ್ಲಿಯೂ ಪ್ರಸ್ತಾಪ ಇಲ್ಲ. 7 ಲಕ್ಷ ರೂ.ವರೆಗಿದ್ದ ತೆರಿಗೆ ಮಿತಿ ಮತ್ತೆ 3 ಲಕ್ಷ ರೂ.ಗಳಿಗೆ ಇಳಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಬರೆ ಎಳೆದಿದೆ. ಜನಪರ ಯೋಜನೆಯಿಲ್ಲದೆ ತೆರಿಗೆ ವಿಧಿಸುವುದೆ ತನ್ನ ಕಾಯಕ ಎಂಬಂತೆ ಕೇಂದ್ರ ವರ್ತಿಸುತ್ತಿದೆ. ಈ ಬಜೆಟ್‌ನಿಂದ ಶ್ರಮಿಕ ವರ್ಗದ ರೈತಾಪಿ ಸಮುದಾಯಕ್ಕೆ ಯಾವುದೇ ಪ್ರಯೋಜನ ಇಲ್ಲ’

-ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ರಾಜ್ಯಕ್ಕೆ ಶೂನ್ಯ ಸಂಪಾದನೆ: ‘ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಗೆ ಯಾವ ಕೊಡುಗೆಯನ್ನೂ ಪ್ರಕಟಿಸದಿರುವುದು ದುರದೃಷ್ಟಕರ. ಇದೊಂದು ಶೂನ್ಯ ಸಂಪಾದನೆಯ ಬಜೆಟ್. ಇದನ್ನು ಕೇಂದ್ರ ಬಜೆಟ್ ಅನ್ನುವ ಬದಲು ಬಿಹಾರ-ಆಂಧ್ರಪ್ರದೇಶ ಬಜೆಟ್ ಎಂದು ಕರೆದಿದ್ದರೆ ಚೆನ್ನಾಗಿರುತ್ತಿತ್ತು. ಕರ್ನಾಟಕವು ಎಲೆಕ್ಟ್ರಿಕ್ ವೆಹಿಕಲ್, ಗ್ರೀನ್ ಎನರ್ಜಿ ಮತ್ತಿತರ ವಲಯಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸುತ್ತಿದೆ. ಈ ವೇಳೆ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಬಜೆಟ್‌ನಲ್ಲಿ ಪ್ರಸ್ತಾಪಗಳು ಇರಬೇಕಿತ್ತು. ದೇಶದ ಜಿಡಿಪಿಗೆ, ಆ ಮೂಲಕ ಆರ್ಥಿಕ ಬೆಳವಣಿಗೆ ಅಧಿಕ ಕೊಡುಗೆ ನೀಡುತ್ತಿದೆ. ಆದರೆ, ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ, ತೆರಿಗೆ ಪಾಲು ನೀಡುವಾಗ ಹೆಚ್ಚಿನ ಭಾಗ ನಿಗದಿಗೊಳಿಸಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕು’

-ಎಂ.ಬಿ.ಪಾಟೀಲ್ ಬೃಹತ್ ಕೈಗಾರಿಕಾ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News