ಹಿರಿಯ ನಟಿ ಲೀಲಾವತಿ-ವಿನೋದ್ ರಾಜ್ ಮನವಿಗೆ ಸ್ಪಂದಿಸಿದ ಡಿಸಿಎಂ

Update: 2023-10-14 13:49 GMT

ಬೆಂಗಳೂರು, ಅ.14: ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಹಾಗೂ ನಿವೇಶನ ನೋಂದಣಿ ವಿಚಾರವಾಗಿ ಹಿರಿಯ ನಟಿ ಡಾ.ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಮಾಡಿದ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಶನಿವಾರ ಸದಾಶಿವನಗರದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಲೀಲಾವತಿ ಹಾಗೂ ವಿನೋದ್ ರಾಜ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಾಣಿಗಳ ರಕ್ಷಣೆ ಈ ತಾಯಿ ಮಗನ ನೆಚ್ಚಿನ ಹವ್ಯಾಸ. ಪಶುವೈದ್ಯಕೀಯ ಕಾಲೇಜು ಉದ್ಘಾಟನೆಗೆ ದಿನಾಂಕ ನೀಡಿ ಎಂದು ಅವರು ನನಗೆ ಕೇಳಿದ್ದಾರೆ. ನಾನು ಸಮಯ ನೋಡಿ ದಿನಾಂಕ ನೀಡುತ್ತೇನೆ. ಇನ್ನು ಅವರಿಗೆ ನಿಗದಿಯಾಗಿರುವ ನಿವೇಶನ ನೋಂದಣಿ ವಿಚಾರವಾಗಿಯೂ ಮನವಿ ಸಲ್ಲಿಸಿದ್ದಾರೆ. ಈ ವಿಚಾರಗಳ ಬಗ್ಗೆ ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದರು.

ಹಿರಿಯರಾದ ಲೀಲಾವತಿ ಅವರನ್ನು ಕರೆದುಕೊಂಡು ಬರುವುದು ಬೇಡ, ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದೆ. ಆದರೂ ಅವರು ನನ್ನ ಮೇಲೆ ಅಭಿಮಾನವಿಟ್ಟು ಬಂದಿದ್ದಾರೆ. ಅವರಿಗೆ ಉತ್ತಮವಾದ ಆರೋಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಇದೇ ವೇಳೆ ಮಾತನಾಡಿದ ನಟ ವಿನೋದ್ ರಾಜ್, ನಾವು ಸುಸಜ್ಜಿತವಾದ ಪಶು ಚಿಕಿತ್ಸೆ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಸಿಬ್ಬಂದಿಗಳನ್ನು ಸರಕಾರದ ಕಡೆಯಿಂದ ನಿಯೊಜಿಸಬೇಕಾಗಿ ಮನವಿ ಸಲ್ಲಿಸಿದ್ದೇವೆ. ಸೊಂಡೆಕೊಪ್ಪ ಬಳಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ಶೇ.99ರಷ್ಟು ನಿರ್ಮಾಣವಾಗಿ ನಿಂತು ಹೋಗಿದ್ದು, ಅದನ್ನು ಕಾರ್ಯಗತಗೊಳಿಸಿದರೆ ಆ ಭಾಗದ ರೈತರಿಗೆ ಉಪಯೋಗವಾಗುತ್ತದೆ ಎಂದು ಡಿಸಿಎಂ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News