ಹಾಸನ| ಸರ್ಕಾರಿ ಭೂಮಿಯಲ್ಲಿನ 300 ಕ್ಕೂ ಹೆಚ್ಚು ಮರಗಳ ಮಾರಣ ಹೋಮ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ತಹಶೀಲ್ದಾರ್ ಮಮತಾ

Update: 2023-12-17 17:02 GMT

ಬೇಲೂರು‌: ತಾಲೂಕಿನ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಮರಗಳನ್ನು ಮಾರಣಹೋಮ ಮಾಡಿದ್ದು, ಸ್ಥಳಕ್ಕೆ ತಹಶೀಲ್ದಾರ್ ಮಮತಾ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರೇಹಳ್ಳಿ‌ ಹೋಬಳಿಯ ನಂದಗೋಡನಹಳ್ಳಿ‌ ಗ್ರಾಮದ ಸರ್ವೆ ನಂಬರ್ 16ರ ಸರ್ಕಾರಿ ಭೂಮಿಯಲ್ಲಿ ಸುಮಾರು‌ ಮುನ್ನೂರಕ್ಕೂ ಹೆಚ್ಚು ಬೆಲೆಬಾಳುವ ಸಾಗವಾನಿ, ಹೊನ್ನೆ, ಬೀಟೆ, ಹಲಸು ಸೇರಿದಂತೆ ಇನ್ನಿತರ ಬೆಲೆಬಾಳುವ ಕಾಡು ಜಾತಿ ಮರಗಳನ್ನು ಕಡಿದು‌ ಮಾರಣ ಹೋಮ ಮಾಡಲಾಗಿದೆ. ಅದೇ ಗ್ರಾಮಕ್ಕೆ ಇಂದು ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮಲೆಕ್ಕಿಗ ಹಕ್ಕುಪತ್ರ ನೀಡಲೆಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ತಿಳಿದು ಬಂದಿದ್ದು, ತಕ್ಷಣ ತಹಶೀಲ್ದಾರ್ ಮಮತಾ ಅವರಿಗೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ತಹಶಿಲ್ದಾರ್ ಮಮತಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿದ್ದರೂ ಸಹ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಏನೂ ಗೊತ್ತಿಲ್ಲದ ಹಾಗೇ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಕಾಡುಗಳ್ಳರು ದಿನನಿತ್ಯ ಸಾಗವಾನಿ, ಹೊನ್ನೆ, ಬೀಟೆ ಸೇರಿದಂತೆ ಇನ್ನಿತರ ಬೆಲೆ ಬಾಳುವ ಮರಗಳನ್ನು ಕಡಿಯುತ್ತಿರುವುದು ಸಾಮಾನ್ಯವಾಗಿದೆ. ಕೆಲವು ಪ್ರಭಾವಿ ವ್ಯಕ್ತಿಗಳು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಗಲಲ್ಲಿಯೇ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ, ಆದರೆ ಈ ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಈ ವಿಷಯ ಗೊತ್ತಿದ್ದೂ ಸುಮ್ಮನಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News