ಕರ್ತವ್ಯನಿರತ ಮಹಿಳಾ ಪಿಎಸ್‌ಐ ಗೆ ಜೀವ ಬೆದರಿಕೆ: ಮೂವರು ಬಂಧನ
ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಜೊತೆ ಅನುಚಿತ ವರ್ತನೆ ತೋರಿದ್ದಲ್ಲದೆ, ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮುದ್ದಿನಪಾಳ್ಯ ಮುಖ್ಯ ರಸ್ತೆಯ ಅಶ್ವ ವೆಜ್ ಮತ್ತು ನಾನ್ ವೆಜ್ ಹೋಟೆಲ್ ಮಾಲಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಎಂಬುವರನ್ನು ಬಂಧಿಸಲಾಗಿದೆ.
ಡಿ.2ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಪ್ರತಿಮಾ ತಡರಾತ್ರಿ ಮುದ್ದಿನಪಾಳ್ಯ ಮುಖ್ಯ ರಸ್ತೆಯ ಅಶ್ವ ವೆಜ್ ಮತ್ತು ನಾನ್ ವೆಜ್ ಹೋಟೆಲ್ ಬಳಿ ತೆರಳಿದ್ದರು. ಅವಧಿ ಮುಗಿದ ಬಳಿಕವೂ ಹೋಟೆಲ್ ತೆರೆದಿದ್ದರಿಂದ ಬಂದ್ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದರು.
ಈ ವೇಳೆ ಹೋಟೆಲ್ ಮಾಲಕ ಸಂಜೀವ್ ಗೌಡ ‘ತನಗೆ ದಿನದ 24 ಗಂಟೆಯೂ ಹೋಟೆಲ್ ತೆರೆದಿರಲು ಅನುಮತಿಯಿದೆ' ಎಂದಿದ್ದಾನೆ. ಅನುಮತಿ ಪತ್ರ ತೋರಿಸಿ ಎಂದಾಗ, ‘ಆರ್.ಟಿ.ಐನಲ್ಲಿ ಅರ್ಜಿ ಹಾಕಿ ಪಡೆದುಕೋ' ಎನ್ನುತ್ತಾ ಏಕವಚನದಲ್ಲಿ ನಿಂದಿಸುತ್ತ, ಅಸಭ್ಯವಾಗಿ ಕೈ ಬೆರಳು ಪ್ರದರ್ಶಿಸಿದ್ದಾನೆ. ಅಲ್ಲದೇ, ‘ನೀವೇ ಲಂಚ ಕೇಳಲು ಬಂದಿದ್ದೀರಿ ಎಂದು ವಿಡಿಯೋ ವೈರಲ್ ಮಾಡುತ್ತೇನೆ, ನಿಮ್ಮ ಬಟ್ಟೆ ಬಿಚ್ಚಿಸಿ, ಜನ್ಮ ಜಾಲಾಡುತ್ತೇನೆ' ಎಂದು ಬಾಯಿಗೆ ಬಂದಂತೆ ಮಾತನಾಡುತ್ತ ಬೆದರಿಕೆ ಹಾಕಿದ್ದಾನೆ. ಆರೋಪಿಗೆ ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಸಾಥ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಜ್ಞಾನಭಾರತಿ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಕರೆಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಪಿಎಸ್‌ಐ ಪ್ರತಿಮಾರಿಂದ ದೂರು ಪಡೆದು ಐಪಿಸಿ ಸೆಕ್ಷನ್ 341, 190, 353, 354 ಮತ್ತಿತರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.