ನೀರಾವರಿ ಪಂಪ್‌ ಸಟ್ ಗಳಿಗೆ 7 ತಾಸು ವಿದ್ಯುತ್ ಸರಬರಾಜು ಮಾಡಲು ನಿರ್ಧಾರ: ಕೆ.ಜೆ.ಜಾರ್ಜ್

Update: 2023-11-21 13:38 GMT

ಬೆಂಗಳೂರು : ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ರಾಜ್ಯ ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರವಾಗಿ ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಸರಬರಾಜು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ನಗರದ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆಯುಂಟಾಗದಂತೆ ಸಾಕಷ್ಟು ಕ್ರಮ ವಹಿಸಲಾಗುತ್ತಿದೆ. ಈ ನಡುವೆ ರಾಜ್ಯದ ರೈತರಿಗೆ ಅನುಕೂಲವಾಗುವಂತೆ ದಿನಕ್ಕೆ 7 ತಾಸು ವಿದ್ಯುತ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ, ವಾಡಿಕೆಗಿಂತ ಮಳೆ ಕಡಿಮೆ ಇದೆ. ಗಣಿಗಾರಿಕೆ ಪ್ರದೇಶಗಳಲ್ಲಿ ಮಳೆಯಾದ ಹಿನ್ನೆಲೆ ಕಲ್ಲಿದ್ದಲು ಒದ್ದೆಯಾಗಿದೆ. ಇದರಿಂದ ಥರ್ಮಲ್ ಪ್ಲ್ಯಾಂಟ್‌ ಗೆ ಕಲ್ಲಿದ್ದಲು ಸಮಸ್ಯೆ ಎದುರಾಗಿದೆ. ಸೋಲಾರ್ ವಿದ್ಯುತ್ ಉತ್ಪತ್ತಿಯೂ ಕಡಿಮೆಯಾಗಿದೆ. ಕರ್ನಾಟಕ ಕತ್ತಲೆಗೆ ಹೋಗಿದೆ ಎಂಬ ಆರೋಪ ಸರಿಯಲ್ಲ ಎಂದು ಅವರು ತಿಳಿಸಿದರು.

2024ರ ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾನಿಂದ 16,500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಹಾಗೂ ಪಂಜಾಬ್(300ಮೆ.ವ್ಯಾ) ಮತ್ತು ಉತ್ತರಪ್ರದೇಶದಿಂದ(100-600ಮೆ.ವ್ಯಾ.) ವಿದ್ಯುತ್ ಖರೀದಿಸಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗುವುದು. ಎಓಹೆಚ್ ಜನರೇಟರ್‌ ಗಳ ಕಾರ್ಯಾಚರಣೆ ಪುನಾರಂಭಿಸಲಾಗುವುದು. ಕೆಪಿಸಿಎಲ್ನ ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆಯನ್ನು 3500 ಮೆ.ವ್ಯಾ.ವರೆಗೆ ಹೆಚ್ಚಿಸಲಾಗುವುದು. ಅಲ್ಲದೆ, ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಜೆ.ಜಾರ್ಜ್ ಹೇಳಿದರು.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಫಲಾನುಭವಿಗಳು ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಶುಲ್ಕ 389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ ಗೃಹ ಜ್ಯೋತಿಯ ಲಾಭ ಪಡೆಯಲು ಇದ್ದ ತೊಡಕನ್ನು ನಿವಾರಿಸಿ, 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಬಳಸಲು ಈ ಮೂಲಕ ಅನುಕೂಲ ಮಾಡಿಕೊಡಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ 10 ಎಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮಥ್ರ್ಯದ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಬಿಲ್ ಅಸಲು 47.7 ಕೋಟಿ ರೂ. ಮತ್ತು ಬಡ್ಡಿ 16.47 ಕೋಟಿ ರೂ. ಸೇರಿ ಒಟ್ಟು 64.24 ಕೋಟಿ ರೂ. 2023ರ ಸೆಪ್ಟೆಂಬರ್ 30ರವರೆಗೆ ಬಾಕಿ ಉಳಿದಿದ್ದು, ರೈತರು ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಕೆ.ಜೆ.ಜಾರ್ಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ಎಂ.ಡಿ.ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.

ಟಿಎಚ್ ಡಿಸಿ ಜೊತೆ ಒಪ್ಪಂದ

ರಾಜ್ಯದಲ್ಲಿ 2500 ಮೆ.ವ್ಯಾ. ಪಂಪ್ಡ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15,000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರಕಾರ ಸ್ವಾಮ್ಯದ ತೆಹ್ರಿ ಹೈಡ್ರೊ ಡೆವಲಪ್ ಮೆಂಟ್  ಕಾರ್ಪೊರೇಶನ್ ಲಿಮಿಟೆಡ್ ಜತೆ ರಾಜ್ಯ ಸರಕಾರ ಸಹಿ ಹಾಕಿದೆ. ಎಂದು ಇಂಧನ ಸಚಿವ  ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

 ಗೃಹಜ್ಯೋತಿ ಯೋಜನೆಯ ವಿವರ

• 2023ರ ನವೆಂಬರ್ ತಿಂಗಳ ಈವರೆಗೆ ನೋಂದಾಯಿಸಿರುವ ಒಟ್ಟು ಗ್ರಾಹಕರು: 1.61 ಕೋಟಿ

• ಪ್ರಯೋಜನ ಪಡೆಯುತ್ತಿರುವ ಒಟ್ಟು ಗ್ರಾಹಕರು: 1.50 ಕೋಟಿ

• ತಿಂಗಳ ಒಟ್ಟು ಸಬ್ಸಿಡಿ ಮೊತ್ತ: 780 ಕೋಟಿ ರೂ.

• ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಸಬ್ಸಿಡಿ ಮೊತ್ತ (4 ತಿಂಗಳುಗಳು): 2900 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News