ಕರ್ನಾಟಕದಲ್ಲಿನ ಹುಲಿ ಸಂರಕ್ಷಿತಾರಣ್ಯಗಳಿಗೆ ದೊರೆಯುತ್ತಿದ್ದ ಅನುದಾನದಲ್ಲಿ ಗಣನೀಯ ಇಳಿಕೆ : ವರದಿ
ಬೆಂಗಳೂರು : ಮಾನವ-ವನ್ಯಜೀವಿಗಳ ನಡುವಿನ ಸಂಘರ್ಷದ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಿಗೇ, ಅರಣ್ಯ ಗಡಿಗಳ ಸಂರಕ್ಷಣೆ ಪ್ರಾಮುಖ್ಯತೆ ಪಡೆಯತೊಡಗಿದೆ. ಆದರೆ, ವರ್ಷಗಳು ಉರುಳಿದಂತೆ, ಹುಲಿ ಯೋಜನೆ, ಆನೆ ಯೋಜನೆ ಹಾಗೂ ಕಾಳ್ಗಿಚ್ಚು ನಿರ್ವಹಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಒದಗಿಸಲಾಗುತ್ತಿದ್ದ ಅನುದಾನ ಪ್ರಮಾಣದಲ್ಲಿ ಇಳಿಕೆಯಾಗತೊಡಗಿದೆ.
ಕರ್ನಾಟಕದಲ್ಲಿರುವ ಬಂಡೀಪುರ, ನಾಗರಹೊಳೆ, ಅಂಶಿ-ದಾಂಡೇಲಿ (ಕಾಳಿ), ಭದ್ರ ಹಾಗೂ BRT(ಬಿಳಿಗಿರಿ ರಂಗನ ಹಿಲ್ಸ್ ) ಹುಲಿ ಸಂರಕ್ಷಿತಾರಣ್ಯ ಸೇರಿದಂತೆ ಐದು ಹುಲಿ ಸಂರಕ್ಷಿತಾರಣ್ಯಗಳ ಸಂರಕ್ಷಣೆ ಮತ್ತು ರಕ್ಷಣಾ ಕಾರ್ಯಗಳಿಗೆ ಹೆಚ್ಚುವರಿ ನೆರವು ದೊರೆಯುತ್ತಿಲ್ಲ ಎನ್ನಲಾಗಿದೆ.
ವನ್ಯಜೀವಿ ರಕ್ಷಣೆ ಕಾಯ್ದೆ, 1972ರ ಸೆಕ್ಷನ್ 38-ವಿ ಅಡಿ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಯಾವುದೇ ರಾಷ್ಟ್ರೀಯ ಉದ್ಯಾನವನ ಅಥವಾ ವನ್ಯಜೀವಿ ಧಾಮಗಳಿಗೆ ಹುಲಿ ಸಂರಕ್ಷಿತಾರಣ್ಯದ ಮಾನ್ಯತೆ ನೀಡಲಾಗುತ್ತದೆ. ಇದಾದ ನಂತರ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯನ್ವಯ ಹುಲಿ ಸಂರಕ್ಷಿತಾರಣ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
“ವನ್ಯಜೀವಿ ರಕ್ಷಣೆ ಕಾಯ್ದೆ, 1972 ಹಾಗೂ ಇನ್ನಿತರ ಅರಣ್ಯ ಕಾಯ್ದೆಗಳನ್ವಯ, ಹಾಲಿ ಅರಣ್ಯ ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಧಾಮಗಳನ್ನಾಗಿ ಉತ್ತಮವಾಗಿ ರಕ್ಷಿಸಲಾಗಿದೆ. ಅಂತಹ ಪ್ರದೇಶವನ್ನು ಹುಲಿ ಸಂರಕ್ಷಿತಾರಣ್ಯ ಎಂದು ಘೋಷಿಸಿದ ನಂತರ, ಸಂರಕ್ಷಿತಾರಣ್ಯವು ಕೇಂದ್ರೀಕೃತ ಪ್ರಾಯೋಜನೆಯಡಿ ಬರುತ್ತದೆ. ಹೀಗಾಗಿ, ಇಂತಹ ಸಂರಕ್ಷಿತಾರಣ್ಯಗಳು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಒದಗಿಸುವ ತಲಾ ಶೇ. 50ರಷ್ಟು ಅನುದಾನದ ಮೇಲೆ ಅವಲಂಬಿತವಾಗಿರುತ್ತವೆ.
2015ರಿಂದ ಹುಲಿ ಯೋಜನೆಯಡಿ ಒದಗಿಸಲಾಗುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ದೇಶಾದ್ಯಂತ ಇರುವ 38 ಹುಲಿ ಸಂರಕ್ಷಿತಾರಣ್ಯಗಳಿಗೆ ಅಂದಾಜು 350 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ, 2023-24ನೇ ಸಾಲಿನಲ್ಲಿ 54 ಸಂರಕ್ಷಿತಾರಣ್ಯಗಳಿಗೆ ಈ ಮೊತ್ತವನ್ನು 150 ಕೋಟಿ ರೂ.ಗೆ ತಗ್ಗಿಸಲಾಗಿದೆ” ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019-20ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಈ ಯೋಜನೆಯಡಿ ಮಂಜೂರಾಗಿದ್ದ 58.29 ಕೋಟಿ ರೂ. ಗೆ ಪ್ರತಿಯಾಗಿ 49.16 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, 2022-23ನೇ ಸಾಲಿನಲ್ಲಿ ಮಂಜೂರಾಗಿದ್ದ 60.51 ಕೋಟಿ ರೂ.ಗೆ ಪ್ರತಿಯಾಗಿ ಕೇವಲ ಶೇ. 50ರಷ್ಟು ಮೊತ್ತ ಮಾತ್ರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಿಡುಗಡೆಯಾಗಿದೆ. ಬಾಕಿ ಮೊತ್ತವನ್ನು ಮುಂದಿನ ಸಾಲಿಗೆ ಪರಿಗಣಿಸಲಾಗಿಲ್ಲ.
2023-24ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಮಂಜೂರಾಗಿದ್ದ 67.84 ಕೋಟಿ ರೂ.ಗೆ ಪ್ರತಿಯಾಗಿ ಕೇವಲ 50.85 ಕೋಟಿ ರೂ.ಮಾತ್ರ ಬಿಡುಗಡೆಗೊಂಡಿದೆ.
“ಅನುದಾನವನ್ನು ಬಿಡುಗಡೆಗೊಳಿಸದಿರುವುದರಿಂದ, ಅದಕ್ಕೆ ತಕ್ಕನಾಗಿ ಬಿಡುಗಡೆಗೊಳ್ಳಬೇಕಿದ್ದ ರಾಜ್ಯ ಸರಕಾರದ ಅನುದಾನದಲ್ಲೂ ಇಳಿಕೆಯಾಗಿದೆ. ಇದರಿಂದ ತೀವ್ರ ಹಣಕಾಸು ಮುಗ್ಗಟ್ಟು ಸೃಷ್ಟಿಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮೋದನೆಯನ್ವಯ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದ್ದರೂ, ಅನುದಾನ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಪಾವತಿ ಪ್ರಕ್ರಿಯೆ ಗಂಭೀರ ಸಮಸ್ಯೆಗೆ ಸಿಲುಕಿದೆ. ಇದಲ್ಲದೆ, ಅನುದಾನ ಬಿಡುಗಡೆಯೂ ವಿಳಂಬಗೊಳ್ಳುತ್ತಿದೆ. ಅನುದಾನದ ಮೊದಲ ಕಂತೇ ಆರ್ಥಿಕ ವರ್ಷದ ಆರು ಅಥವಾ ಏಳನೇ ತಿಂಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಮುಂಚೂಣಿ ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ಸಂರಕ್ಷಿತಾರಣ್ಯಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ” ಎಂದು ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಬಂಡೀಪುರ ಸಂರಕ್ಷಿತಾರಣ್ಯದ 50ನೇ ಸ್ಮರಣಾರ್ಥ ಕಾರ್ಯಕ್ರಮದ ವೆಚ್ಚದ ಬಾಕಿ ಮೊತ್ತವಾದ 2.34 ಕೋಟಿ ರೂ.ವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಇನ್ನೂ ಬಿಡುಗಡೆಗೊಳಿಸಿಲ್ಲ. “ಕಾರ್ಯಕ್ರಮ ಸಂಘಟಕರು ಹಾಗೂ ಹೋಟೆಲ್ ನ ಬಾಕಿಯನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪಾವತಿಸಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುದಾನಕ್ಕಾಗಿ ನಿರೀಕ್ಷಿಸಲಾಗುತ್ತಿದೆ” ಎಂದೂ ಅವರು ಹೇಳಿದ್ದಾರೆ.
ಹುಲಿ ಯೋಜನೆಗೆ ದೊರೆಯುತ್ತಿರುವ ಅನುದಾನಕ್ಕೆ ಹೋಲಿಸಿದರೆ, ಆನೆ ಯೋಜನೆಗೆ ದೊರೆಯುತ್ತಿರುವ ಅನುದಾನ ತೀರಾ ಕಳಪೆಯಾಗಿದೆ. ಇದೀಗ ಈ ಯೋಜನೆಯನ್ನು ಹುಲಿ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ. ಉದಾಹರಣೆಗೆ, 2022-23ನೇ ಸಾಲಿನಲ್ಲಿ ಹುಲಿ ಯೋಜನೆಗೆ 30.01 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೆ, ಆನೆ ಯೋಜನೆಗೆ ಕೇವಲ 1.71 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರಕಾರವು ಹುಲಿ ಯೋಜನೆಯಡಿ 50.56 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಆನೆ ಯೋಜನೆಗೆ ಕೇವಲ 4.35 ಕೋಟಿ ರೂ. ಬಿಡುಗಡೆಗೊಳಿಸಿದೆ.
2019-20ನೇ ಸಾಲಿನಲ್ಲಿ ಕಾಳ್ಗಿಚ್ಚು ನಿರ್ವಹಣೆಗಾಗಿ 2.279 ಕೋಟಿ ರೂ. ಬಿಡುಗಡೆ ಮಾಡಿದ್ದ ಕೇಂದ್ರ ಸರಕಾರ, 2023-24ನೇ ಸಾಲಿನಲ್ಲಿ ಆ ಮೊತ್ತವನ್ನು 88.08 ಲಕ್ಷ ರೂ.ಗೆ ಇಳಿಕೆ ಮಾಡಿದೆ.