ರೈತರಿಗೆ ದ್ರೋಹ ಬಗೆದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿ: ರಾಜ್ಯ ರೈತ ಸಂಘ ಕರೆ
ಬೆಂಗಳೂರು: ವಚನ ಪಾಲನೆ ಮಾಡದೆ ರೈತರಿಗೆ ದ್ರೋಹ ಬಗೆದಿರುವ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.
ಸೋಮವಾರದಂದು ಸಂಘವು ಪ್ರಕಟನೆ ಹೊರಡಿಸಿದ್ದು, ಮೋದಿಯವರು ಚುನಾವಣೆಗೆ ಮೊದಲು ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತಂದು ರೈತರ ಬೆಳೆಗಳ ವೆಚ್ಚಕ್ಕೆ ಶೇ.50ರಷ್ಟು ಕನಿಷ್ಟ ಬೆಂಬಲ ಬೆಲೆ ದೊರಕುವಂತೆ ಮಾಡುತ್ತೇವೆ. 2022ರ ಫೆಬ್ರವರಿ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಅದು ಹುಸಿಯಾಗಿದೆ ಎಂದು ತಿಳಿಸಿದೆ.
ಮೋದಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಸ್ವಾಮಿನಾಥನ್ ವರದಿಯ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದರ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದರು. ರೈತ ಆದಾಯ ದುಪ್ಪಟ್ಟುಗೊಳ್ಳಲಿಲ್ಲ. ಬದಲಿಗೆ, ಕೃಷಿ ಸಬ್ಸಿಡಿಗಳನ್ನು ಕಡಿತಗೊಳಿಸಿ, ಕೃಷಿ ಪರಿಕರಗಳ ಬೆಲೆ ಹೆಚ್ಚಿಸಿ ಕೃಷಿಗೆ ತಗಲುವ ವೆಚ್ಚವನ್ನು ದುಪ್ಪಟ್ಟುಗೊಳಿಸಿದರು ಎಂದು ರೈತ ಸಂಘ ಖಂಡಿಸಿದೆ.
ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು 5 ಲಕ್ಷ ಕೋಟಿ ರೂ. ಹಣ ಸಾಕು, ಆದರೆ ಹಣವಿಲ್ಲ ಎಂಬ ಕಾರಣವನ್ನು ನೀಡಿ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ ಮೋದಿಯವರ ಆಳ್ವಿಕೆಯಲ್ಲಿ ಕಾರ್ಪೋರೇಟ್ ಕಂಪನಿಗಳ 20 ಲಕ್ಷ ಕೋಟಿ. ರೂ. ಸಾಲ ಮನ್ನಾ ಮಾಡಲಾಗಿದೆ. ಈಗ ರೈತ ಕುಟುಂಬಗಳ ಮೇಲಿನ ಸಾಲದ ಹೊರೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿದ್ದು, ರೈತರನ್ನು ಸಾಲದ ವಿಷ ವೃತ್ತದಲ್ಲಿ ಸಿಕ್ಕಿಸಲಾಗಿದೆ ಎಂದು ತಿಳಿಸಿದೆ.
ಬರದ ನಾಡಾದ ಮಧ್ಯ ಕರ್ನಾಟಕದ ಚಿತ್ರದುರ್ಗ, ತುಮಕೂರು ಸೇರಿ ಇತರೆ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಒದಗಿಸಲು 5,300 ಕೋಟಿ ರೂ. ನೀಡುವುದಾಗಿ ಬಜೆಟ್‍ನಲ್ಲಿ ಘೋಷಿಸಿ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಕಿತ್ತೂರು ಕರ್ನಾಟಕದ ಕುಡಿಯುವ ನೀರಿನ ಯೋಜನೆ ಮಹದಾಯಿಗೆ ಪರಿಸರ ಇಲಾಖೆಯಿಂದ ಕ್ಲಿಯರೇನ್ಸ್ ನೀಡಿಲ್ಲ. ಮೇಕೆದಾಟು ಯೋಜನೆಗೆ ಅನುಮತಿಯನ್ನು ನೀಡದೇ ರಾಜ್ಯದ ನೀರಾವರಿಯನ್ನು ನಿರ್ಲಕ್ಷ ಮಾಡಿದೆ ಎಂದು ರೈತ ಸಂಘ ಟೀಕಿಸಿದೆ.