ನಿವೃತ್ತ ಉದ್ಯೋಗಿಯ ಗ್ರಾಚ್ಯುಟಿ ಪಾವತಿಸಲು ವಿಳಂಬ: ಬಡ್ಡಿ ಸಹಿತ ಪಾವತಿಸಲು ಹೈಕೋರ್ಟ್ ಆದೇಶ

Update: 2023-09-19 18:23 GMT

ಧಾರವಾಡ: ನಿವೃತ್ತ ಉದ್ಯೋಗಿಯೋರ್ವರಿಗೆ ಶೇ.10ರಷ್ಟು ಬಡ್ಡಿ ಸಮೇತ 4,09,550 ರೂಪಾಯಿ ಗ್ರಾಚ್ಯುಟಿ ಹಣವನ್ನು ಪಾವತಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.

2007, ಮಾ.31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ಬಾಬು ಎಂಬುವವರು ಗ್ರಾಚ್ಯುಟಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಈ ಆದೇಶ ಪ್ರಕಟಿಸಿದೆ.

ಈ ಆದೇಶ ಪತ್ರ ರವಾನೆಯಾದ ದಿನದಿಂದ 10 ದಿನಗಳ ಒಳಗೆ ಅರ್ಜಿದಾರರಿಗೆ ಗ್ರಾಚ್ಯುಟಿ ಪಾವತಿಯಾಗದೇ ಇದ್ದಲ್ಲಿ, ಶೇ.10ರಷ್ಟು ಬಡ್ಡಿಯ ಜೊತೆಗೆ, ವಿಳಂಬವಾಗಿ ಹಣ ನೀಡುವ ದಿನದವರೆಗೂ ಪ್ರತಿ ದಿನವೂ 1 ಸಾವಿರ ರೂಪಾಯಿ ಸೇರಿಸಿ ಸಂತ್ರಸ್ತರಿಗೆ ಗ್ರಾಚ್ಯುಟಿ ಹಣ ನೀಡಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಗ್ರಾಚ್ಯುಟಿಯು ಉದ್ಯೋಗದಾತರ ಮನಸೋ ಇಚ್ಛೆ ಮೇರೆಗೆ ತಡೆಹಿಡಿಯಬಹುದಾದ ವರದಾನವಲ್ಲ. ಸಂತ್ರಸ್ತ ವ್ಯಕ್ತಿಗೆ ಉದ್ಯೋಗ ನೀಡಿರುವುದು ಕರ್ನಾಟಕ ಸರಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಾರ್ಯದರ್ಶಿಯಾಗಿದ್ದಾರೆ. 16 ವರ್ಷಗಳ ಕಾಲ ಗ್ರಾಚ್ಯುಟಿ ನೀಡದೇ ಸರಕಾರ ತನ್ನ ನೌಕರನನ್ನು ನಡೆಸಿಕೊಂಡಿರುವುದು ನಾಗರಿಕರೆಡೆಗೆ, ಅದರಲ್ಲೂ ನಿವೃತ್ತರಾದ ನಾಗರಿಕರೆಡೆಗೆ ಸರಕಾರದ ನಿರಾಸಕ್ತಿ ತೋರುತ್ತದೆ. ಹೀಗಾಗಿ, ಗ್ರಾಚ್ಯುಟಿ ನಿರಾಕರಿಸುವ ಮೂಲಕ ನಿಷ್ಠುರತೆಯನ್ನು ಪ್ರದರ್ಶಿಸಲಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿದಾರರು 1973ರಲ್ಲಿ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸವಾನಂತರದ ಕೇಂದ್ರದಲ್ಲಿ ಮೊದಲ ವಿಭಾಗದ ಗುಮಾಸ್ತ(ಎಫ್‍ಡಿಎ)ರಾಗಿ ನೇಮಕಗೊಂಡಿದ್ದರು. 34 ವರ್ಷಗಳ ಸೇವೆ ನಂತರ ಅವರು ನಿವೃತ್ತರಾಗಿದ್ದು, ಗ್ರಾಚ್ಯುಟಿ ಬಾರದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News