ರಾಜ್ಯದಲ್ಲಿ ರಾಕ್ಷಸರು ಆಡಳಿತ ನಡೆಸುತ್ತಿದ್ದಾರೆ: ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Update: 2023-10-04 17:33 GMT

ಸಂಸದ ಪ್ರತಾಪ್ ಸಿಂಹ

ಮೈಸೂರು: ರಾಜ್ಯದಲ್ಲಿ ಒಂದೊಂದು ಸಾರಿ ಒಳ್ಳೆಯವರು ರಾಜ್ಯ ಅಳುತ್ತಾರೆ. ಕೆಲವೊಮ್ಮೆ ರಾಕ್ಷಸರು ರಾಜ್ಯ ಅಳುತ್ತಾರೆ. ಈಗ ರಾಕ್ಷಸರ ರಾಜ್ಯ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ. ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು ಚೂರಿ ಹಿಡಿದು ಹಿಂಬಂಧಿಯಿಂದ ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳಿದರು.

ಮಹಿಷಾ ದಸರಾ ವಿರೋಧಿಸಿ ಅ.13 ರಂದು ಚಾಮುಂಡಿ ಬೆಟ್ಟ ಚಲೋ

ಮಹಿಷಾ ದಸರಾ ವಿರೋಧಿಸಿ ಅ.13 ರಂದು ಚಾಮುಂಡಿ ಬೆಟ್ಟ ಚಲೋ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಟಿಪ್ಪು ಹೈದರಾಲಿ ಕಾಲ ಬಿಟ್ಟರೆ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದರೆ ಏನು, ನವರಾತ್ರಿ ಅಂದ್ರೆ ಏನು ಎಂದು ಗೊತ್ತಿದೆ. 2015-16 ರಲ್ಲಿ ಮಹಿಷಾ ದಸರಾ ಎನ್ನುವ ಅಸಹ್ಯ ಅಪಹಾಸ್ಯ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.

ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನು ನಿಲ್ಲಿಸಲಿಲ್ಲ. ಇಲ್ಲಿ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿದೆ ಎಂದರು.

ಅಕ್ಟೋಬರ್ 13 ರಂದು ‘ಚಾಮುಂಡಿ ಬೆಟ್ಟ ಚಲೋ’ ಜಾಥ ನಡೆಸುತ್ತೇವೆ. ಇದರಲ್ಲಿ 5 ಸಾವಿರ‌ ನಾಗರಿಕರು ಪಾಲ್ಗೊಳ್ಳುತ್ತಾರೆ. ಚಾಮುಂಡಿ ಬೆಟ್ಟದ ಪಾದ ಹಾಗೂ ವಿಶ್ವವಿದ್ಯಾಲಯದ ಆವರಣದಿಂದ ಜಾಥ ತೆರಳಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News