ಭಟ್ಕಳದಲ್ಲಿ ಹೆಚ್ಚಿದ ಡೆಂಗ್ಯೂ; ಕಳೆದ ಎರಡು ದಿನಗಳಲ್ಲಿ ಇಬ್ಬರು ಮೃತ್ಯು

Update: 2023-10-23 10:15 GMT

ಪ್ರಜ್ವಲ್ ಖಾರ್ವಿ | ಸಾದಾ ಮೀರಾ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಡೆಂಗ್ಯೂ ಬಗ್ಗೆ ಜನರು ಹೆಚ್ಚು ಆತಂಕಿತರಾಗಿದ್ದು ಕಳೆದ ಎರಡು ದಿನಗಳಲ್ಲಿ ಡೆಂಗ್ಯೂ ಭಾದಿತ ಇಬ್ಬರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಭಟ್ಕಳ ಬಂದರ್ ನಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ಪ್ರಜ್ವಲ್ ಖಾರ್ವಿ(24) ತೀವ್ರ ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ವೈದ್ಯಾಧಿಕಾರಿ ರಜೆಯಲ್ಲಿ ಇರುವುದನ್ನು ಕಂಡು ಅದೇ ದಿನ ಕಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಉಡುಪಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಸಾದಾ ಮೀರಾ(77) ಎಂಬವರು  ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ದಾಖಲೆಗಳು ದೃಢಪಡಿಸಿವೆ. ಇವರು ಕಳೆದ 5-6 ದಿನಗಳ ಹಿಂದೆ ಡೆಂಗ್ಯೂ ಜ್ವರ ಪೀಡಿತರಾಗಿ ಇಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರೋಗ ಉಲ್ಭಣಗೊಂಡ ಹಿನ್ನೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಭಟ್ಕಳದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು, ಮೂಲಗಳ ಪ್ರಕಾರ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 30 ಕ್ಕೂ ಹೆಚ್ಚು ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.  100 ಕ್ಕೂ ಹೆಚ್ಚು ರೋಗಿಗಳು ಭಟ್ಕಳದ ಖಾಸಗಿ ಕ್ಲಿನಿಕ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಭಟ್ಕಳ ಮುಸ್ಲಿಂ ಜಮಾತ್‌ನ ಸಕ್ರಿಯ ಸದಸ್ಯ ಅಶ್ರಫ್ ಸಾದ ಎಂಬುವವರು ಮಾಹಿತಿ ನೀಡಿ, ಅವರು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಹತ್ತಕ್ಕೂ ಹೆಚ್ಚು ರೋಗಿಗಳು ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆಗೆ ದಾಖಲಾಗಿದ್ದರೆ, ಅನೇಕ ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಆದರೆ ಕಂದಾಪುರ ಮತ್ತು ಉಡುಪಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಕುರಿತು ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಭಟ್ಕಳದಲ್ಲಿ ಅತಿಯಾದ ತ್ಯಾಜ್ಯ ರಸ್ತೆಗಳಲ್ಲಿ ಬಿದ್ದುಕೊಂಡಿದ್ದು ಹೆಬಳೆ, ಮಾವಿನಕುರ್ವೆ ಗ್ರಮಪಂಚಾಯತ್ ವ್ಯಾಪ್ತಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಕುರಿತಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿಕೊಂಡರೂ ನಿರ್ಲಕ್ಷ್ಯ ವಹಿಸಿರುವ ಪಂಚಾಯತ್ ಆಡಳಿತ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News