ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೆ ಎರಡನೆ ವೈದ್ಯಕೀಯ ಅಭಿಪ್ರಾಯ ಪಡೆಯಲು ಅವಕಾಶ

Update: 2024-11-19 16:48 GMT

ಬೆಂಗಳೂರು: ತುರ್ತು ಅಲ್ಲದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೆ ಎರಡನೆ ವೈದ್ಯಕೀಯ ಅಭಿಪ್ರಾಯ ಪಡೆಯಬಹುದು. ರೋಗಿಗಳಿಗೆ ರೋಗ ನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಹೆಚ್ಚುವರಿ ದೃಷ್ಟಿಕೋನವನ್ನು ಎರಡನೆ ವೈದ್ಯಕೀಯ ಅಭಿಪ್ರಾಯ ಒದಗಿಸಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಂಗಳವಾರದಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟನೆ ಹೊರಡಿಸಿದ್ದು, ಕ್ಲಿಷ್ಟಕರ ಪ್ರಕರಣಗಳಲ್ಲಿ ಮತ್ತೊಬ್ಬ ವೈದ್ಯರು, ಶಸ್ತ್ರಚಿಕಿತ್ಸಕರು ರೋಗ ನಿರ್ಣಯವನ್ನು ದೃಡೀಕರಿಸಬಹುದು ಅಥವಾ ನಿರಾಕರಿಸಬಹುದು ಹಾಗೂ ಪರ್ಯಾಯ ಚಿಕಿತ್ಸಾ ವಿಧಾನವನ್ನು ಸೂಚಿಸಬಹುದು ಎಂದಿದ್ದಾರೆ.

ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಶಸ್ತ್ರಚಿಕಿತ್ಸಕರು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು. ಹೀಗಾಗಿ ಎರಡನೆ ವೈದ್ಯಕೀಯ ಅಭಿಪ್ರಾಯ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ತೊಡಕುಗಳು ಮತ್ತು ಚೇತರಿಕೆಯ ಸವಾಲುಗಳನ್ನು ಪೂರ್ಣ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಎರಡನೆ ಅಭಿಪ್ರಾಯವು ಶಸ್ತ್ರಚಿಕಿತ್ಸೆಯಲ್ಲದ ಇತರೆ ಚಿಕಿತ್ಸಾ ವಿಧಾನಗಳನ್ನು ಸೂಚಿಸಬಹುದು. ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ವಿಭಿನ್ನ ಅಥವಾ ಹೆಚ್ಚು ವಿಶೇಷ ಗಮನವನ್ನು ಹೊಂದಿರುವ ತಜ್ಞವೈದ್ಯರಿಂದ ಸುಧಾರಿತ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ತಜ್ಞ ವೈದ್ಯರ ಅಭಿಪ್ರಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ 1800 4258 330 ಸಹಾಯವಾಣಿ ತೆರೆಯಲಾಗಿದೆ. ರೋಗಿಗಳು, ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ಉಚಿತವಾಗಿ ನುರಿತ ವೈದ್ಯರಿಂದ ಶಸ್ತ್ರಚಿಕಿತ್ಸೆಗಳ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದರ ಕುರಿತು ಅಭಿಪ್ರಾಯ ಪಡೆಯಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News