ಗ್ರಾಮೀಣಾಭಿವೃದ್ಧಿ ಇಲಾಖೆ | 2,022 ಖಾಲಿ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಆರಂಭ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 2022 ಹುದ್ದೆಗಳನ್ನು ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮೂಲಕ ತುಂಬುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ಶೀಘ್ರದಲ್ಲಿಯೇ ಹುದ್ದೆಗಳ ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳು ಪಡೆಯಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 136 ಕಿರಿಯ ಎಂಜನಿಯರ್, 288 ಸಹಾಯಕ ಎಂಜನಿಯರ್ ಮತ್ತು 24 ಸಹಾಯಕ ಕಾರ್ಯಪಾಲಕ ಎಂಜನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕೆಪಿಎಸ್ಸಿ ಕಳೆದ ಜ.31ರಂದು ಅಂತಿಮಪಟ್ಟಿಯ ಅಧಿಸೂಚನೆಯನ್ನು ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಈ ಪೈಕಿ 24 ಸಹಾಯಕ ಕಾರ್ಯಪಾಲಕ ಎಂಜನಿಯರ್ ಗಳ ನೇಮಕಾತಿ ಆದೇಶವನ್ನು ಕೆಪಿಎಸ್ಸಿ ತಡೆ ಹಿಡಿದಿದ್ದು, ಉಳಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ಇಲಾಖೆಯಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾದ ವಿವಿಧ 91 ಹುದ್ದೆಗಳನ್ನು ನೇರ ನೇಮಕಾತಿ ಕೋಟಾದಡಿ ಆನ್‍ಲೈನ್ ಮೂಲಕ ಭರ್ತಿ ಮಾಡಲು ಕೆಪಿಎಸ್ಸಿಗೆ ತಿಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಹುದ್ದೆಗಳಲ್ಲಿ 20 ಕಿರಿಯ ಎಂಜನಿಯರ್, 18 ಪ್ರಥಮ ದರ್ಜೆ ಸಹಾಯಕರು, 3 ಪ್ರಥಮ ದರ್ಜೆ ಲೆಕ್ಕ ಸಹಾಯಕರು, 42 ದ್ವಿತೀಯ ದರ್ಜೆ ಸಹಾಯಕರು ಹಾಗೂ 8 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸೇರಿದ್ದಾರೆ. ಈ ಸಂಬಂಧ ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಯಲ್ಲಿ ಐವರು ಸಹಾಯಕ ಕಾರ್ಯಪಾಲಕ ಎಂಜನಿಯರ್ ಗಳ ನೇರ ನೇಮಕಾತಿ ಮಾಡಲು ಕೆಪಿಎಸ್ಸಿಗೆ ಫೆ.24ರಂದು ಸೂಚಿಸಲಾಗಿದೆ, ಇದೇ ಇಲಾಖೆಯಲ್ಲಿನ 2 ಪ್ರಥಮ ದರ್ಜೆ ಲೆಕ್ಕ ಸಹಾಯಕ, 49 ದ್ವಿತೀಯ ದರ್ಜೆ ಸಹಾಯಕ ಮತ್ತು 6 ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಲು ಕೆಪಿಎಸ್ಸಿಗೆ ಸೂಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಗತ್ಯವಾದ 40 (ಇವುಗಳಲ್ಲಿ 8 ಹುದ್ದೆಗಳು ಕಲ್ಯಾಣ ಕರ್ನಾಟಕ) ಗ್ರೂಪ್ ಎ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿಗಳನ್ನು ಭರ್ತಿ ಮಾಡಲು ಕೆಪಿಎಸ್ಸಿ ಫೆ.26ರಂದು ಅಧಿಸೂಚನೆ ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ, ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 256 ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಇವುಗಳಲ್ಲಿ 106 ಹೈ.ಕ), 220 ಗ್ರಾಮ ಪಂಚಾಯತಿ ಕಾರ್ಯದರ್ಶಿ(ಗ್ರೇಡ್-1) (ಇವುಗಳಲ್ಲಿ 85 ಹೈ.ಕ), 343 ಗ್ರಾಮ ಪಂಚಾಯತಿ ಕಾರ್ಯದರ್ಶಿ(ಗ್ರೇಡ್-2) (ಇವುಗಳಲ್ಲಿ 52 ಹೈ.ಕ) ಮತ್ತು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕ(ಇವುಗಳಲ್ಲಿ 50 ಹೈ.ಕ) ಹುದ್ದೆಗಳನ್ನು ನೇರವಾಗಿ ತುಂಬಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಭರ್ತಿ ಮಾಡಲು ಕೆಪಿಎಸ್ಸಿಗೆ ಶೀಘ್ರದಲ್ಲೇ ಸೂಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಿ.ಪಂ. ಹಾಗೂ ತಾ.ಪಂ.ಗಳಲ್ಲಿ ಖಾಲಿ ಇರುವ 100 ಪ್ರಥಮ ದರ್ಜೆ ಸಹಾಯಕರು, 200 ದ್ವಿತೀಯ ದರ್ಜೆ ಸಹಾಯಕರು ಮತ್ತು ಕಲ್ಯಾಣ ಕರ್ನಾಟಕ ವೃಂದದ 48 ಪ್ರಥಮ ದರ್ಜೆ ಸಹಾಯಕರು ಹಾಗೂ 109 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬಿಕೊಳ್ಳಲು ಕೆಪಿಎಸ್ಸಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಜಿ.ಪಂ. ಸಿಇಓಗಳಿಗೆ ಸೂಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಮ್ಮ ಸರಕಾರ ನುಡಿದಂತೆ ನಡೆಯುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ 2022 ಹುದ್ದೆಗಳನ್ನು ತುಂಬಿಸಲು ಬದ್ಧತೆಯನ್ನು ತೋರುವ ಮೂಲಕ ಯುವಜನರಲ್ಲಿ ಹೊಸ ಆಶಯಗಳನ್ನು ಮೂಡಿಸುವುದರರೊಂದಿಗೆ ಗ್ರಾಮೀಣ ಜನರ ಕೆಲಸ ಕಾರ್ಯಗಳು ವಿಳಂಬರಹಿತವಾಗಿ ನಡೆಯಲು ಅನುವು ಮಾಡಿಕೊಡುವ ಸಂಕಲ್ಪ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.