ಹಳಿ ತಪ್ಪುತ್ತಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ; ಫಲಾನುಭವಿಗಳ ಆಯ್ಕೆಯಲ್ಲಿ ಬೇಕು ಪಾರದರ್ಶಕತೆ

Update: 2023-11-09 07:07 GMT
Editor : Navaz | Byline : ಸಾಜಿದ್‌ ಅಲಿ

ಕಲಬುರಗಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ವಿವಿಧ ಯೋಜನೆಗಳಿಗೆ ಕಳೆದ ಐದು ವರ್ಷಕ್ಕೆ ಹೊಲಿಸಿದರೆ 2023-24ನೇ ಸಾಲಿನಲ್ಲಿ ಮೂರು ಪಟ್ಟು ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ವರ್ಷದಿಂದ ವರ್ಷಕ್ಕೆ ಇಲಾಖೆಯ ಏರಿಕೆ ಆಗಬೇಕಾಗಿದ್ದ ಅನುದಾನ ಕಡಿತಗೊಂಡಿರುವುದರಿಂದ ರಾಜ್ಯದ 224 ಮತಕ್ಷೇತ್ರಗಳಿಂದ 1,55,180 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೇವಲ 10547 ಫಲಾನುವಿಗಳು ಲಾಭ ಸಿಗಲಿದ್ದು,1,44,633 ಅರ್ಜಿದಾರರ ನಿರೀಕ್ಷೆಗಳು ಹುಸಿಯಾಗಲಿವೆ.

ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಒಟ್ಟಾರೆ 31,613 ಅರ್ಜಿಗಳು ಬಂದಿವೆ. ಆಯ್ಕೆ ಆಗುವ ಫಲನಾನುಭವಿ ಸಂಖ್ಯೆ 225 ಮಂದಿ ಮಾತ್ರ. ಜಿಲ್ಲೆಯ 31 ಸಾವಿರಕ್ಕೂ ಹೆಚ್ಚು ಅರ್ಜಿದಾರರ ನಿರೀಕ್ಷೆಗಳು ಹುಸಿಯಾಗಲಿವೆ.

“ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರಕಾರದ ಬೆಂಬಲ ಮತ್ತು ಬಡತನದಿಂದ ಸ್ವಾವಲಂಬನೆ ಕಡೆಗೆ” ಎಂಬ ಘೋಷವಾಕ್ಯದಡಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 1986 ಫೆಬ್ರವರಿ 7 ರಂದು ರಾಜ್ಯದಲ್ಲಿ ಸ್ಥಾಪನೆಗೊಂಡಿದೆ. 37ವರ್ಷ ಪೂರೈಸಿರುವ ನಿಗಮ ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ಹಾಗೂ ಆರ್ಥಿಕವಾಗಿ ದುರ್ಬಲರಾದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸುತ್ತದೆ.

ಶಾಸಕರೇ ಫಲಾನುಭವಿಗಳ ಆಯ್ಕೆಯನ್ನು ಅಂತಿಮಗೊಳ್ಳಿಸುತ್ತಿರುವುದರಿಂದ ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿಗಳು ನಿಗಮದಿಂದ ಲಾಭ ಪಡೆಯುವವರ ಸಂಖ್ಯೆ ವಿರಳವಾಗಿದಲ್ಲದೇ. ನಿಗಮದ ಬಹುಪಾಲು ಯೋಜನೆಗಳಿಗೆ ಕ್ಷೇತ್ರದ ಶಾಸಕ ಆಪ್ತರು ಅಥವಾ ಕಾರ್ಯಕರ್ತರೇ ಆಯ್ಕೆ ಆಗುತ್ತಾರೆಂಬ ಬಲವಾದ ಆರೋಪಗಳು ಇವೆ.

2011ನೇ ಸಾಲಿನ ಜನಗಣತಿ ಪ್ರಕಾರ ಕಲಬುರಗಿಯ 9 ಮತಕ್ಷೇತ್ರಗಳ ಅಲ್ಪಸಂಖ್ಯಾತರ ಜನಸಂಖ್ಯೆ 536749 ಇದೆ. 2021-22ನೇ ಸಾಲಿನಲ್ಲಿ 7674 ಅರ್ಜಿಗಳ ಪೈಕಿ 717 ಜನರು ಆಯ್ಕೆ ಆಗಿದ್ದರು. 2022-23ರಲ್ಲಿ 4831 ಅರ್ಜಿಗಳು ಬಂದಿದ್ದು, 182 ಮಂದಿ ಆಯ್ಕೆ ಆಗಿದ್ದರು. ಈ ಬಾರಿ 2023-24 ನೇ ಸಾಲಿನಲ್ಲಿ ನಿಗಮಕ್ಕೆ ಗಂಗಾ ಕಲ್ಯಾಣ ಯೋಜನೆಗೆ, ಶ್ರಮಶಕ್ತಿ, ಶ್ರಮಶಕ್ತಿ ವಿಶೇಷ ಮಹಿಳೆಯರಿಗೆ, ಸ್ವಾಲಂಬನೆ, ಸಮುದಾಯಧಾರಿತ ತರಬೇತಿಗೆ ಹಾಗೂ ವೃತಿ ಪ್ರೊತ್ಸಾಯೋಜನೆಗಳಿಗೆ ಸೇರಿಸಿ 31,613 ಅರ್ಜಿಗಳು ಬಂದಿವೆ. ಎಲ್ಲಾ ಯೋಜನೆಗಳಿಗೆ ಸೇರಿ ಫಲಾನುಭವಿಗಳ ಟಾರ್ಗೆಟ್ ಆಯ್ಕೆ 225 ಮಾತ್ರ.

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತಿನಂತೆ ಯೋಜನೆಯ ಆಯ್ಕೆ ವಿಧಾನ ಪಾಲಿಸಲಾಗುತ್ತಿದೆ. ಇದರಿಂದಾಗಿ ಅಲ್ಪಸಂಖ್ಯಾತರರು ಯೋಜನೆಗಳ ಲಾಭ ಪಡೆಯಲು ಕ್ಷೇತ್ರದ ಶಾಸಕರ ಮತ್ತು ರಾಜಕೀಯ ಪಕ್ಷದ ಮುಖಂಡರ ದುಂಬಾಲು ಬಿಳುವ ಪರಿಸ್ಥಿತಿಯಿಂದ ಹೆಸರಿಗಷ್ಟೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವಾಗಿ ಬಿಟ್ಟಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿ ಮಾತ್ರ ಹಳಿ ತಪ್ಪುತ್ತಿದೆ.

ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರು ನಿಗಮದಲ್ಲಿರುವ ತಪ್ಪುಗಳು ಸರಿ ಪಡಿಸಿ ಪಾರದರ್ಶಕತೆ ಆಡಳಿತ ಕಡೆಗೆ ಹೆಜ್ಜೆ ಇಡುವ ನಟ್ಟಿನಲ್ಲಿ ಕ್ರಮಕೈಗೊಂಡು, ನಿಗಮಕ್ಕೆ ಕಡಿತಗೊಳಿಸಿರುವ ಅನುದಾನ ಮರಳಿ ಪಡೆಯುವ ಜೊತೆಗೆ ನಿಜವಾದ ಅರ್ಥದಲ್ಲಿ ನಿಗಮದ ಯೋಜನೆಗಳಿಂದ ಅಲ್ಪಸಂಖ್ಯಾತರ ಅಭಿವೃದ್ಧಿಯಾಗುವ ದಿಸೆಯಲ್ಲಿ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

-------------------------------------------------------------------------------------------

''ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಹೆಸರಿಗೆ ಮಾತ್ರ ಇದೆ. ಬಹುಪಾಲು ಯೋಜನೆಗಳಿಗೆ ಕ್ಷೇತ್ರ ಶಾಸಕರು ತಮ್ಮ ಕಾರ್ಯಕರ್ತರಿಗೆ ಆಯ್ಕೆ ಮಾಡುತ್ತಾರೆ. ಮುಸ್ಲಿಮ್, ಕ್ರೈಸ್ತರು, ಜೈನರು, ಬೌದ್ಧರು, ಶಿಖ್ಖರು ಮತ್ತು ಪಾರ್ಸಿಗಳನ್ನು ಒಳಗೊಂಡಂತೆ ಶೇಖಡವಾರು ಮತ್ತು ಮೀಸಲಾತಿ ಆಧಾರವಾಗಿಟ್ಟುಕೊಂಡು ನಿಗಮ ಫಲಾನುಭವಿಗಳ ಆಯ್ಕೆ ಆಗಬೇಕು. ಕ್ರಿಶ್ಚಿಯನ್ ಡೌವಲೇಪಮೆಂಟ್ ಶಾಖೆ ತೆರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದಂತೆ ಜಾರಿಗೆ ತರಬೇಕು''

– ಸಂಧ್ಯಾರಾಜ್ ಸಮೂಲ್, ರಾಷ್ಟೀಯ ಉಪಾಧ್ಯಕ್ಷ ಅಖಿಲ ಭಾರತ ಕ್ರೈಸ್ತ ಮಹಾಸಭಾ. ಕಲಬುರಗಿ

----------------------------

''ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಸಮುದಾಯರು ಆರ್ಥಿಕವಾಗಿ ಅತಿ ಹಿಂದುಳಿದವರಾಗಿದ್ದು, ಸರಕಾರ ಈ ಭಾಗದ ಬಡ ಕುಟುಂಬಗಳ ಅನುಕೂಲವಾಗುವ ದಿಶೆಯಲ್ಲಿ ಫಲಾನುಭವಿಗಳ ಆಯ್ಕೆ ಗುರಿ ಹೆಚ್ಚಿಸಬೇಕೆಂದು ಮನವಿ ಮಾಡುತ್ತೇವೆ''

- ಸುರೇಶ ಎಸ್. ತಂಗಾ, ಜೈನ್ ಸಮುದಾಯ ಯುವ ಮುಖಂಡ ಕಲಬುರಗಿ

---------------------------------

''ಯೋಜನೆಗಳ ಫಲಾನುಭವಿಗಳ ಆಯ್ಕೆ ಕ್ಷೇತ್ರದ ಶಾಸಕರೇ ಅಂತಿಮಗೊಳಿಸುವುದಾದರೆ ನಿಗಮ ಯಾಕೆ ಬೇಕು?''

- ರಿಯಾಝ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರರ ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ಸಾಜಿದ್‌ ಅಲಿ

contributor

Similar News