ಖರ್ಗೆ ಮೈಬಣ್ಣದ ಕುರಿತು ಅವಹೇಳನಕಾರಿ ಹೇಳಿಕೆ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿಯಲ್ಲಿ ಪ್ರಕರಣ ದಾಖಲು

Update: 2023-08-03 17:40 GMT

ಕಲಬುರಗಿ, ಆ.3: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈ ಬಣ್ಣಕ್ಕೆ ಸಂಬಂಧಿಸಿ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿ ನಗರದ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. 

ರಾಜೀವ್ ಜಾನೆ ಅವರು ಸಲ್ಲಿಸಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಆರಗ ಜ್ಞಾನೇಂದ್ರ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

ಆರಗ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‍ಗೆ ಪತ್ರ ಬರೆದಿತ್ತು. ಈ ಮಧ್ಯೆ, ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಎನ್ನುವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.

ಆರಗ ಜ್ಞಾನೇಂದ್ರ ಹೇಳಿದ್ದೇನು? 

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆಗಸ್ಟ್ 2ರಂದು ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕ, ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಮಾತನಾಡಿರುವ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿ, ಕಾಡಿನ ಬಗ್ಗೆ ಸರಿಯಾಗಿ ಅರಿವೇ ಇಲ್ಲದ ಬೀದರ್ ಜಿಲ್ಲೆಯವರು ಅರಣ್ಯ ಸಚಿವರಾಗಿದ್ದಾರೆ. ಇದು ನಮ್ಮ ರಾಜ್ಯದ ದುರಂತ ಎಂದಿದ್ದಾರೆ. ಬೀದರ್ ಜಿಲ್ಲೆಯ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿರುವುದಕ್ಕೆ ಈ ಹೇಳಿಕೆ ನೀಡಿದ ಮಾಜಿ ಗೃಹ ಸಚಿವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಆ ಭಾಗದವರು ಸುಟ್ಟು ಕರಕಲಾದಂತೆ ಇರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಆರಗ ಜ್ಞಾನೇಂದ್ರ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News