ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ | ಸಂಸದ ಅನಂತಕುಮಾರ್ ಹೆಗಡೆ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆ

Update: 2024-03-15 18:05 GMT

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಸಂಸದ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಮುಂಡಗೋಡು ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ, ಅರ್ಜಿಯ ಕುರಿತ ಮುಂದಿನ ವಿಚಾರಣೆಯವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ‌ ಆದೇಶಿಸಿದೆ. ಅಲ್ಲದೆ ಮುಂಡಗೋಡು ಠಾಣಾ ಪೊಲೀಸರು ಮತ್ತು ದೂರುದಾರರಾದ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಣಪತಿ ಬಸವಂತಪ್ಪ ಹುನ್ನಳ್ಳಿಗೆ ನೋಟಿಸ್‌ ಜಾರಿಗೊಳಿಸಿದೆ.

2024ರ ಫೆ.23ರಂದು ಮುಂಡಗೋಡು ತಾಲೂಕಿನ ಪಾಳಾ ಗ್ರಾಮ ಮತ್ತು ಇಂದೂರ ಗ್ರಾಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಅನಂತ ಕುಮಾರ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಎಂದು ವರದಿಯಾಗಿತ್ತು.

ಈ ಕುರಿತು ಮುಂಡಗೋಡು ಠಾಣೆ ಹೆಡ್ ಕಾನ್ಸ್ಟೇಬಲ್ ದೂರು ದಾಖಲಿಸಿದ್ದರು. ಈ ಸಂಬಂಧ ಮುಂಡಗೋಡು ಠಾಣಾ ಪೊಲೀಸರು ಅನಂತ ಕುಮಾರ ಹೆಗಡೆ ವಿರುದ್ಧ ಗಲಭೆ ಉಂಟು ಮಾಡಲು ಪ್ರಚೋದನಕಾರಿ ಹೇಳಿಕೆ ನೀಡಿದ, ಸುಳ್ಳು ಮಾಹಿತಿ ಹರಡಿದ, ಉದ್ದೇಶಪೂರ್ವಕವಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಈ ಪ್ರಕರಣದ ಕುರಿತು ಸಂಸದರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News