ದೇವನಹಳ್ಳಿ ವಿಮಾನ ನಿಲ್ದಾಣ: ಪ್ರಯಾಣಿಕನ ಬ್ಯಾಗ್‍ನಲ್ಲಿದ್ದ 234 ಕಾಡು ಪ್ರಾಣಿಗಳ ರಕ್ಷಣೆ

Update: 2023-08-23 14:07 GMT

Photo - Twitter@TheSouthfirst

ಬೆಂಗಳೂರು, ಆ.23: ಎರಡು ಟ್ರಾಲಿ ಬ್ಯಾಗ್‍ಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ಬರೋಬ್ಬರಿ 234 ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡುವಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆಗಸ್ಟ್ 21ರ ರಾತ್ರಿ ಬ್ಯಾಂಕಾಕ್‍ನಿಂದ ಬಂದ ವಿಮಾನ ಸಂಖ್ಯೆ ಎಫ್‍ಡಿ-137ರಲ್ಲಿ ಪ್ರಯಾಣಿಕ ಬಂದಿಳಿದ್ದು, ಏರ್ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆಗ ಎರಡು ಟ್ರಾಲಿ ಬ್ಯಾಗ್‍ಗಳಲ್ಲಿ ಕಾಡು ಪ್ರಾಣಿಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.

ಅದರಲ್ಲಿ ಒಂದು ಟ್ರಾಲಿ ಬ್ಯಾಗ್‍ಗೆ ಆತ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಗೊತ್ತಾಗಿದೆ. ಪ್ರಯಾಣಿಕನ ಟ್ರಾಲಿ ಬ್ಯಾಗ್‍ಗಳನ್ನು ತಪಾಸಣೆ ಮಾಡಿದಾಗ ಹೆಬ್ಬಾವು, ಊಸರವಳ್ಳಿ, ಇಗ್ವಾನಾ, ಆಮೆಗಳು, ಅಲಿಗೇಟರ್‍ಗಳು ಮತ್ತು ಒಂದು ಮರಿ ಕಾಂಗರೂ ಸೇರಿದಂತೆ ಒಟ್ಟು 234 ವನ್ಯಜೀವಿಗಳು ಪತ್ತೆಯಾಗಿದೆ ಎಂದು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಾಡು ಪ್ರಾಣಿ ಮತ್ತು ಸಸ್ಯಗಳ ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶದ ಅನುಬಂಧಗಳಲ್ಲಿ ಹೇಳಲಾದ ಕೆಲವು ಅಪರೂಪದ ಪ್ರಾಣಿಗಳನ್ನು ಪಟ್ಟಿ ಮಾಡಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News