ತಿರುಪತಿ ಮಾದರಿಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ: ಸಿದ್ದರಾಮಯ್ಯ

Update: 2024-10-13 14:11 GMT

ಬೆಳಗಾವಿ: ‘ತಿರುಪತಿ ಮಾದರಿಯಲ್ಲಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಆರೋಗ್ಯಕ್ಕೆ ಪೂರಕವಾದ ಶೌಚಾಲಯ, ಕುಡಿಯುವ ನೀರು, ಪ್ರಸಾದವು ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆಸ್ಥೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.

ರವಿವಾರ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ನಡೆಸಿದ ಅವರು, ‘ದೇವಿ ಸನ್ನಿದಿಗೆ ಬರುವ ಭಕ್ತರೆಲ್ಲರಿಗೂ ತಾಯಿಯ ದರ್ಶನ ಸಿಗುವ ವ್ಯವಸ್ಥೆಯನ್ನು ಆಧ್ಯತೆಯಲ್ಲಿ ಒದಗಿಸಬೇಕು. ಬಡವರು, ಶ್ರಮಿಕರು, ತಳ ಸಮುದಾಯದವರು, ಮಹಿಳೆಯರು ಮತ್ತು ದುಡಿಯುವ ವರ್ಗದವರೇ ಹೆಚ್ಚಾಗಿ ಬರುವ ಕ್ಷೇತ್ರ ಇದು’ ಎಂದು ತಿಳಿಸಿದರು.

ಕ್ಷೇತ್ರ ಆಕರ್ಷಣೀಯವಾಗಿರಬೇಕು: ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಅಚ್ಚುಕಟ್ಟಾಗಿದ್ದರೆ ಕ್ಷೇತ್ರದ ಆದಾಯವೂ ಹೆಚ್ಚಾಗುತ್ತದೆ. ಈ ಆದಾಯದಿಂದ ಭಕ್ತರಿಗೆ ಇನ್ನೂ ಹೆಚ್ಚಿನ ಮೂಲಭೂತ ಸವಲತ್ತು ಒದಗಿಸಬಹುದು. ಎತ್ತಿನಗಾಡಿಯಲ್ಲಿ ಹೆಚ್ಚು ಪ್ರಮಾಣದ ಭಕ್ತರು ಆಗಮಿಸುವುದರಿಂದ ಕಾರು, ಬೈಕುಗಳ ಜೊತೆಗೆ ಎತ್ತಿನಗಾಡಿ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಎತ್ತು, ಹಸುಗಳಿಗೆ ಮೇವು-ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಸೂಚಿಸಿದರು.

ಪ್ರತಿ ವರ್ಷ ಒಂದೂವರೆಯಿಂದ 2ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆಯನ್ನು ರೂಪಿಸಬೇಕು. ಕ್ಷೇತ್ರಕ್ಕೆ ಸೇರಿದ ಜಾಗ, ಜಮೀನನ್ನು ಗುರುತಿಸಿ, ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಬೇಕು. ಸ್ಥಳದ ಸುತ್ತ ಕಾಂಪೌಂಡ್ ಹಾಕಿ ಜಾಗದ ಭದ್ರತೆ ಮಾಡಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಭಕ್ತರು ಬರುವ ದೇವಸ್ಥಾನದ ಮಾರ್ಗ ಮತ್ತು ಸುತ್ತಲ ಪ್ರದೇಶಗಳಲ್ಲಿ ಹಾಗೂ ಭಕ್ತರು ಉಳಿಯುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಒದಗಿಸಬೇಕು. ರೋಪ್ ವೇ ಸವಲತ್ತು ಕಲ್ಪಿಸುವುದರಿಂದ ಅನುಕೂಲ ಆಗುತ್ತದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ ಮತ್ತು ಜಿಲ್ಲೆಯ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News