ಹಿಂಸೆಯ ಮೌಲ್ಯ ಎತ್ತಿ ಹಿಡಿಯುವ ದಸರಾ ಆಚರಣೆ: ಬಿ.ಟಿ. ಲಲಿತಾ ನಾಯಕ್

Update: 2024-10-13 15:51 GMT

ಬಿ.ಟಿ.ಲಲಿತಾ ನಾಯಕ್ (File Photo) 

ಬೆಂಗಳೂರು: ದೇಶದಲ್ಲಿ ಪ್ರಸ್ತುತ ಆಚರಣೆ ಮಾಡುತ್ತಿರುವ ದಸರಾ ಹಬ್ಬವು ಹಿಂಸೆಗೆ ಪ್ರಚೋದನೆ ಕೊಡುವಂತದ್ದು ಎಂದು ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ನಾಗಸೇನ ಬುದ್ಧ ವಿಹಾರದಲ್ಲಿ ಎಸ್‌ಎಸ್‌ಡಿ ವತಿಯಿಂದ ಹಮ್ಮಿಕೊಂಡಿದ್ದ ‘ಅಶೋಕ ವಿಜಯ ದಶಮಿ ಮತ್ತು ಧಮ್ಮಚಕ್ರ ಪ್ರವರ್ತನಾ ಸಮಾರಂಭ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನಾದ್ಯಂತ ಆಚರಿಸುತ್ತಿರುವ ದಸರಾ ಹಬ್ಬವು ಯುದ್ಧ ಮಾಡಿ ದುಷ್ಟರನ್ನು ಸಂಹಾರ ಮಾಡಬೇಕೆನ್ನುವ ಆಶಯವನ್ನು ಪ್ರತಿಪಾದಿಸುತ್ತದೆ. ದೇವರು ಇದ್ದರೆ ಸಂಹಾರ ಮಾಡಬೇಕಾಗಿಲ್ಲ, ಅವರ ಮನಸ್ಸನ್ನು ಪರಿವರ್ತನೆ ಮಾಡುತ್ತಾನೆ ಎಂದು ಹೇಳಿದರು.

ಕಟ್ಟುಕಥೆಗಳ ಮೌಢ್ಯಗಳಿಂದ ಜನ ಹೊರಬಂದು ವೈಜ್ಞಾನಿಕವಾಗಿ, ಬುದ್ದನ ರೀತಿಯಲ್ಲಿ ಯೋಚಿಸುವ ಅಗತ್ಯವಿದೆ. ಡಾ.ಅಂಬೇಡ್ಕರ್ ಬುದ್ದರನ್ನು ಓದಿಕೊಂಡು ಜನರಿಗೆ ಸತ್ಯಾಸತ್ಯತೆಗಳನ್ನು ತಿಳಿಸುವ ಕೆಲಸ ಮಾಡಿದವರು. ಬಸವ-ಬುದ್ಧರ ಆಶಯ, ಸರಳತೆ-ಅಹಿಂಸೆಯ ಗಾಂಧಿವಾದವನ್ನೂ ಸಂವಿಧಾನದಲ್ಲಿ ಅಳವಡಿಸಿ ಜನಗಳಿಗೆ ಮಾರ್ಗ ತೋರಿದ ಅಂಬೇಡ್ಕರ್‌ರನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅಶೋಕ ಚಕ್ರವರ್ತಿ ಯುದ್ಧ ಮುಖ್ಯವಲ್ಲ ಎಂದು ಶಸ್ತ್ರತ್ಯಾಗ ಮಾಡಿದನೋ, ಆ ರೀತಿಯಲ್ಲಿ ನಾವೆಲ್ಲರೂ ಅಶೋಕ ವಿಜಯದಶಮಿಯನ್ನು ಆಚರಿಸಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ, ಹಿಂಸೆಗೆ ದೂರವಾಗಿ, ಅಹಿಂಸ ರಾಜ್ಯವನ್ನು ಕಟ್ಟಬೇಕು. ಸಮಾಜವನ್ನು ಅಹಿಂಸೆ ಕಡೆಗೆ ಕರೆದೊಯ್ಯುವಂತಹ ಕಾರ್ಯಕ್ರಮಗಳು ಆಗಬೇಕು. ಬೌದ್ಧ ಧರ್ಮ ಪ್ರತಿಯೊಬ್ಬರ ಜೀವನದ ಮೌಲ್ಯದ ರೀತಿಯಾಗಬೇಕು. ಅಶೋಕ ಚಕ್ರವರ್ತಿ ತನ್ನ ಶಸ್ತ್ರವನ್ನು ತ್ಯಾಗ ಮಾಡುತ್ತಾನೆ. ಕಳಿಂಗ ಯುದ್ಧದ ನಂತರ ಬುದ್ಧನ ಮಾತುಗಳು ಮನಸ್ಸಿಗೆ ನಾಟಿ ಬೌದ್ಧ ಧರ್ಮ ಸ್ವೀಕರಿಸುವ ದಿನವನ್ನು ಅಶೋಕ ವಿಜಯದಶಮಿ ಎಂದು ಕರೆಯುತ್ತಾರೆ ಎಂದು ಲಲಿತಾ ನಾಯಕ್ ಮಾಹಿತಿ ನೀಡಿದರು.

ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ಭಾರತೀಯ ಮೂಲನಿವಾಸಿಗಳು ತಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಗಳ ಮೂಲಕ ಆಧ್ಯಾತ್ಮಿಕ ಅಸ್ಮಿತೆಯನ್ನು ಮುಂದುವರೆಸಿಕೊಂಡು ಸಾಗುವ ಬಹುದೊಡ್ಡ ಹಾದಿಗೆ ಅಡಿಪಾಯ ಹಾಕಿದ್ದರು. ಅಂತಹ ಬಹುದೊಡ್ಡ ಸಾಂಸ್ಕೃತಿಕ ಪರಂಪರೆಯ ಐತಿಹಾಸಿಕ ಆಚರಣೆಗಳೆಲ್ಲ ಬಹು ಮುಖ್ಯವೆನಿಸುವುದು ಅಶೋಕ ಚಕ್ರವರ್ತಿಯು ಪ್ರಾರಂಭ ಮಾಡಿದ ವಿಜಯ ದಶಮಿಯ ಮಹಾಸಂದರ್ಭದಿಂದ ಎಂದು ಹೇಳಿದರು.

ಅಶೋಕ ಚಕ್ರವರ್ತಿ ಯುದ್ಧ ತ್ಯಾಗ ಮಾಡಿ ಧಮ್ಮ ದೀಕ್ಷೆ ಪಡೆದು ಅಹಿಂಸೆಯ ಬುದ್ಧಮಾರ್ಗವನ್ನು ಅನುಸರಿಸಿದ ದಿನವಾಗಿದ್ದರಿಂದ ಈ ದಿನವನ್ನು ವಿಜಯದಶಮಿಯೆಂದು ಹೆಸರಿನಲ್ಲಿ ಆಚರಿಸಲಾಗುತ್ತದೆ. ಅ.14ಕ್ಕೆ ನಾಗಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೀಕ್ಷೆ ಪಡೆದು ಇತಿಹಾಸವನ್ನು ಸೃಷ್ಟಿಸಿದರು. ಈ ಎರಡು ಮಹಾದಿನಗಳು ಅಶೋಕ-ಅಂಬೇಡ್ಕರ್ ಮಹಾ ದೀಕ್ಷಾ ದಿನಗಳಾಗಿ ಆಚರಿಸಲ್ಪಡುತ್ತದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News