ಧಾರವಾಡ: ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ!

Update: 2023-08-18 08:33 GMT

ಧಾರವಾಡ: ನಗರದ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಹೇಳಲಾದ ಮಗುವಿಗೆ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮತ್ತೆ ಜೀವ ಬಂದಿರುವ ಘಟನೆ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

ಮಗುವಿನ ಪೋಷಕರ ಪ್ರಕಾರ, ಒಂದೂವರೆ ವರ್ಷದ ಮಗು ಆಕಾಶ್ ಬಸವರಾಜ ಪೂಜಾರನನ್ನು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಆಕಾಶ್ ‌ಹೃದಯ ಬಡಿತ ನಿಲ್ಲಿಸಿದ್ದಾನೆ ಎಂದು ಕಿಮ್ಸ್ ವೈದ್ಯರು ಹೇಳಿದ್ದರು. ಮೃತಪಟ್ಟಿದ್ದಾನೆಂದು ಘೋಷಿಸಿದ್ದ ಆಕಾಶನನ್ನು ಊರಲ್ಲಿಯೇ ಅಂತ್ಯಕ್ರಿಯೆ ಮಾಡಲು ಆತನ ಪಾಲಕರು ಬಸಾಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ಕೂಡ ನಡೆದಿತ್ತು. ಈ ವೇಳೆ ಬಾಲಕ ಉಸಿರಾಡಿದ್ದಾನೆ ಎಂದು ಹೇಳಿದ್ದಾರೆ. 

ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ,  ʼʼಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಮಗು ಜೀವಂತ ಇರುವಾಗಲೇ ಡಿಸ್ಟಾರ್ಜ್ ಮಾಡಿಸಿಕೊಂಡು ಬಾಲಕ ಸಂಬಂಧಿಕರು ಹೋಗಿದ್ದಾರೆʼʼ ಎಂದು  ಸ್ಪಷ್ಟಪಡಿಸಿದ್ದಾರೆ.

ಸರ್ಟಿಫಿಕೇಟ್ ಕೊಟ್ಟಿಲ್ಲ: ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ ಸ್ಪಷ್ಟನೆ 

ʼʼಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಮಗು ಜೀವಂತ ಇರುವಾಗಲೇ ಡಿಸ್ಟಾರ್ಜ್ ಮಾಡಿಸಿಕೊಂಡು ಬಾಲಕ ಸಂಬಂಧಿಕರು ಹೋಗಿದ್ದಾರೆʼʼ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ ಸ್ಪಷ್ಟಪಡಿಸಿದ್ದಾರೆ. 

ʼʼಕಳೆದ ಎಂಟತ್ತು ದಿನದ ಹಿಂದೆ ಮೆದುಳು ಜ್ವರ ಹಿನ್ನಲೆ ಬಾಲಕನಿಗೆ ಮೆದುಳಿನಲ್ಲಿ ನೀರು ತುಂಬಿಕೊಂಡ ಹಿನ್ನಲೆ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೇ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದರು.‌ ನಮ್ಮ ವೈದ್ಯರು ಮೆದಳು ಜ್ವರದ ಕಾರಣದಿಂದ ಚಿಕಿತ್ಸೆ ನೀಡಿದ್ದಾರೆʼʼ ಎಂದರು.  

ʼʼಬಾಲಕನ ಸಂಬಂಧಿಗಳು ಏಕಾಏಕಿಯಾಗಿ ಮಗು ಜೀವಂತ ಇರುವಾಗಲೇ ಡಿಸ್ಟಾರ್ಜ್ ಮಾಡಿಕೊಂಡು ತಮ್ಮ ಸ್ವ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಗ್ರಾಮಸ್ಥರು‌ ಮಗು ಬದುಕಿದೆ. ಯಾಕೆ ಕರೆದುಕೊಂಡು ಬಂದಿದ್ದೀರಿ ಎಂದಾಗ ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮತ್ತೆ ತಡರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದ್ರೆ ಮಗುವಿನ ಸ್ಥಿತಿ‌ಯ ಬಗ್ಗೆ ಏನು ಹೇಳಲು ಆಗುವುದಿಲ್ಲʼʼ ಎಂದು ಡಾ. ರಾಮಲಿಂಗಪ್ಪ ಅಂಟರಥಾನಿ ಮಾಹಿತಿ ನೀಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News