ಸಾವರ್ಕರ್ ಕುರಿತು ವೈಯಕ್ತಿಕ ಟೀಕೆ ಮಾಡಿಲ್ಲ: ಸಚಿವ ದಿನೇಶ್ ಗುಂಡೂರಾವ್

Update: 2024-10-03 14:52 GMT

ಬೆಂಗಳೂರು: ಗಾಂಧೀವಾದ ಹಾಗೂ ಸಾವರ್ಕರ್ ಅವರ ಮೂಲಭೂತ ವಾದದ ಬಗ್ಗೆ ವಿಶ್ಲೇಷಣೆ ಮಾಡಿದ್ದೇನೆಯೇ ಹೊರೆತು, ಸಾವರ್ಕರ್ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ನನ್ನದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಸಾವರ್ಕರ್ ಮಾಂಸ ಹಾರಿಯಾಗಿದ್ದರು ಎಂಬ ತಮ್ಮ ಹೇಳಿಕೆಗೆ ಮಾಧ್ಯಮಗಳು ವಿವಾದದ ಸ್ವರೂಪ ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಅವರು, ತಮ್ಮ ಹೇಳಿಕೆಯನ್ನ ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎಂದರು.

ಗಾಂಧೀಜಿ ಸಸ್ಯಹಾರಿಯಾಗಿದ್ದರು. ಹಿಂದು ಧರ್ಮ ಹಾಗೂ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅವರಿಗೆ ಅಪಾರವಾದ ನಂಬಿಕೆಯಿತ್ತು. ಆದರೆ ಸಾವರ್ಕರ್ ನಾಸ್ತಿಕರಾಗಿ ಹಿಂದು ರಾಷ್ಟ್ರ ಕಟ್ಟಲು ಹೊರಟಿದ್ದರು. ಅವರ ಮೂಲಭೂತವಾದ ನಮ್ಮ ದೇಶದ ಸಂಸ್ಕೃತಿಯಲ್ಲ. ಅದು ಯುರೋಪ್ ನಿಂದ ಬಂದಿದ್ದು ಎಂದು ಹೇಳಿದ್ದೇನೆ ಅವರು ತಿಳಿಸಿದರು.

ಅಲ್ಲದೇ ಸಾವರ್ಕರ್ ಮಾಂಸಹಾರಿಯಾಗಿದ್ದರು. ಗೋಹತ್ಯೆಯನ್ನ ಅವರು ವಿರೋಧಿಸಿರಲಿಲ್ಲ. ಒಂದು ರೀತಿ ಅವರು ಮಾಡರ್ನಿಸ್ಟ್ ಆಗಿ ಕಾಣಿಸಿಕೊಂಡರೂ, ಅವರ ಮೂಲಭೂತವಾದ ನಮ್ಮ ದೇಶದ ಪರಂಪರೆಗೆ ವಿರುದ್ಧವಾಗಿದೆ. ಹೀಗಾಗಿ ದೇಶದಲ್ಲಿ ಗಾಂದೀವಾದ ಗೆಲ್ಲಬೇಕು ಎಂದು ಹೇಳಿಕೆ ನೀಡಿದ್ದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

ಸಾರ್ವಕರ್ ನಾಸ್ತಿಕರು, ಮಾಂಸಹಾರಿ ಸೇವೆನೆ ಮಾಡುತ್ತಿದ್ದರು ಎಂಬುದನ್ನು ಅವರೇ ಹಲವು ಪ್ರಸಂಗಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನ ನಾನು ಹೊಸದಾಗಿ ಏನು ಹೇಳುತ್ತಿರುವುದಲ್ಲ. ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು ಇದ್ದವು. ಹಾಗೆ ನೋಡಿದರೆ ಗಾಂಧೀಜಿ ಸಂಪ್ರದಾಯಸ್ಥರು. ಹಿಂದು ಸಂಸ್ಕೃತಿ, ಧರ್ಮದ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು ಎಂದು ಅವರು ಹೇಳಿದರು.

ಆದರೆ ಗಾಂಧಿಜೀಯವರದ್ದು ಡೆಮಾಕ್ರೆಟಿಕ್ ವ್ಯಕ್ತಿತ್ವ. ಇತರ ಧರ್ಮಗಳನ್ನು ಅವರು ಗೌರವಿಸುತ್ತಿದ್ದರು. ಸಾವರ್ಕರ್ ಅವರದ್ದು ಮೂಲಭೂತವಾದ. ಹೀಗಾಗಿ ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ. ಅವರಲ್ಲೂ ಅನೇಕರು ಪ್ರಜಾಪ್ರಭುತ್ವದ ಮನಸ್ಥಿತಿ ಉಳ್ಳವರಿದ್ದಾರೆ. ಹೀಗಾಗಿ ಗಾಂಧೀವಾದಕ್ಕೆ ನಾವು ಹೆಚ್ಚು ಮನ್ನಣೆ ನೀಡುವ ಮೂಲಕ ಮೂಲಭೂತವಾದದ ವಿರುದ್ಧ ಹೋರಾಟ ನಡೆಸುವ ಅಗತ್ಯತೆ ಇದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News