‘ಭ್ರೂಣ ಹತ್ಯೆ’ಯ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಸೂಚನೆ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಪಿಸಿಪಿಎನ್‍ಡಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತಮ ವಕೀಲರ ನಿಯೋಜನೆ ಮೂಲಕ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಮತ್ತು ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಎಲ್ಲ ಕ್ರಮ ವಹಿಸಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ರೀತಿಯ ಅಗತ್ಯ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಹಿಡಿಯಬೇಕಿದ್ದು, ಆ ಕೆಲಸ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ಮರು ಪ್ರತಿಕ್ರಿಯಿಸಿದ ಸದಸ್ಯ ಯುಬಿ ವೆಂಕಟೇಶ್, ಸರಕಾರದ ಉತ್ತರ ಸರಿಯಾಗಿಯೇ ಇದೆ. ಆದರೆ, ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಶಿಕ್ಷೆ ಹೆಚ್ಚು ಮಾಡಿ ಭಯ ಹುಟ್ಟಿಸಿ ಮಟ್ಟ ಹಾಕಿ ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ದಿನೇಶ್ ಗುಂಡೂರಾವ್, ಭ್ರೂಣ ಹತ್ಯಾ ಆರೋಪಿಗಳ ವಿರುದ್ಧ ನಾವು ಪ್ರಕರಣ ದಾಖಲಿಸುತ್ತೇವೆ. ಆದರೆ, ಕೋರ್ಟ್‍ನಲ್ಲಿ ಅವರಿಗೆ ಜಾಮೀನು ಸಿಗಲಿದೆ, ಜಾಮೀನು ಸಿಗಲು ಕಷ್ಟವಾಗುವ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಿದೆ. ಪಿಸಿಪಿಎನ್‍ಡಿಟಿ ಕಾಯ್ದೆಯಡಿ ಕ್ರಮ ವಹಿಸಲಿದ್ದೇವೆ. ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಾವು ಗಟ್ಟಿಯಾಗಿರುತ್ತೇವೆ ಎಂದರು.
ಇಂತಹ ಘಟನೆಗಳಲ್ಲಿ ಮೊದಲು ಪೊಲೀಸರು ಕೇಸ್ ಬುಕ್ ಮಾಡುತ್ತಿದ್ದರು. ಆದರೆ, ಈಗ ನಾವು ಆರೋಗ್ಯ ಇಲಾಖೆ ಸಕ್ಷಮ ಪ್ರಾಧಿಕಾರವಾಗಿದ್ದು ಅದರಿಂದ ದೂರು ಕೊಡಿಸಲಿದ್ದೇವೆ. ಡಿಎಚ್‍ಒ ಮೂಲಕ ಕೇಸ್ ಬುಕ್ ಮಾಡುತ್ತೇವೆ. ಈಗಾಗಲೇ 23 ಆಸ್ಪತ್ರೆ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಮೈಸೂರಿನ ಮಾತಾ ಆಸ್ಪತ್ರೆ ಪರವಾನಗಿ ರದ್ದು ಮಾಡಿದ್ದೇವೆ. ಕೋರ್ಟ್ ಮುಖಾಂತರ ಪ್ರಕರಣಗಳು ತೀರ್ಮಾನವಾಗಲಿದೆ. ಫಾಲೋಅಪ್‍ಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಒಳ್ಳೆಯ ವಕೀಲರ ನೇಮಕಕ್ಕೂ ಸೂಚಿಸಲಾಗಿದೆ. ಭ್ರೂಣ ಹತ್ಯೆ ಕೊಲೆಗೆ ಸಮಾನ ಎನ್ನುವ ಕುರಿತು ಕಾನೂನು ತರಲು ಹಿಂದೆ ಚಿಂತನೆ ಇತ್ತು, ಈಗ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪಶು ಔಷಧ ಮನುಷ್ಯರಿಗೆ ನೀಡಲ್ಲ: ಪಶುಗಳಿಗೆ ನೀಡಿದ ಔಷಧವನ್ನು ಮನುಷ್ಯರಿಗೆ ನೀಡಲ್ಲ. ಔಷಧಗಳ ಲೇಬಲ್ ದೋಷದಿಂದಾಗಿ ಆ ಔಷಧ ವಾಪಸ್ ಕಳಿಸಲಾಗಿದೆಯೇ ಹೊರತು ಔಷಧಿಯಲ್ಲಿ ಯಾವುದೇ ಲೋಪವಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಗಳಿಗೆ ಕೊಡುವ ಔಷಧ ನಾವು ಜನರಿಗೆ ಕೊಟ್ಟಿಲ್ಲ, ಸರಬರಾಜುದಾರರು ಲೋಗೋಗ್ರಾಂನಲ್ಲಿ ಎ.ಎಚ್.ಡಿ.ಎಚ್ ಇಲಾಖೆ ಎಂದು ಬಂದಿದೆ. ಇದನ್ನು ಕೂಡಲೇ ಏಳು ಪ್ರಯೋಗಾಲಯಕ್ಕೆ ಕಳಿಸಿ ಪರಿಶೀಲಿಸಲಾಗಿದ್ದು, ಔಷಧದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಲೇಬಲ್ ಸಮಸ್ಯೆ ಅಷ್ಟೇ, ಆದರೂ, ದಂಡ ಹಾಕಿ ಮರು ಪೂರೈಕೆಗೆ ಸೂಚಿಸಲಾಗಿದೆ ಎಂದರು.