ಕಾರ್ಪೋರೇಟ್ ಕಂಪೆನಿಗಳು ಆರೋಗ್ಯ ಕ್ಷೇತ್ರಕ್ಕೆ ಸಿಎಸ್‍ಆರ್ ಹಣ ಹೆಚ್ಚು ವಿನಿಯೋಗಿಸಲಿ : ದಿನೇಶ್ ಗುಂಡೂರಾವ್

Update: 2024-08-09 15:36 GMT

PC : x/@dineshgrao

ಬೆಂಗಳೂರು : ಆರೋಗ್ಯ ಕ್ಷೇತ್ರಕ್ಕೆ ಕಾರ್ಪೋರೇಟ್ ಕಂಪೆನಿಗಳು ಸಿಎಸ್‍ಆರ್ ಹಣವನ್ನು ಹೆಚ್ಚು ಬಳಕೆ ಮಾಡಲು ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸಿ-ಕ್ಯಾಂಪ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಪೋರೇಟ್ ಕಂಪೆನಿಗಳ ಫೌಂಡೆಶನ್ಸ್ ರೌಂಡ್‌ ಟೇಬಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಿಎಸ್‍ಆರ್ ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆ ತರಬಹುದು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.

ಜನರ ಆರೋಗ್ಯ ಕಾಪಾಡಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಆರೋಗ್ಯ ರಕ್ಷಣೆಯತ್ತ ಹೆಚ್ವಿನ ಗಮನ ಹರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಜನರ ತಪಾಸಣೆ ನಡೆಯಲಿದೆ. ಈ ಯೋಜನೆಯಿಂದ ಸಾಕಷ್ಟು ಬದಲಾವಣೆಯನ್ನ ನಿರೀಕ್ಷಿಸುತ್ತಿದ್ದು, ಇಂತಹ ಯೋಜನೆಯಲ್ಲಿ ಕಾರ್ಪೋರೇಟ್ ಕಂಪೆನಿಗಳು ಸಿಎಸ್‍ಆರ್ ಮೂಲಕ ಸೇವೆ ಸಲ್ಲಿಸಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗೃಹ ಆರೋಗ್ಯ ಕಾರ್ಯಕ್ರಮದಲ್ಲಿ ಅಗತ್ಯ ತಂತ್ರಜ್ಞಾನ ಒದಗಿಸುವತ್ತು ಕಂಪೆನಿಗಳು ಸಿಎಸ್‍ಆರ್ ಹಣ ವಿನಿಯೋಗಿಸಬಹುದು. ಅಲ್ಲದೆ, ಕೆಎಫ್‍ಡಿಯಂತÀಹ ರೋಗಗಳಿಗೆ ಇಂದು ವ್ಯಾಕ್ಸಿನ್ ತಯಾರಿಸುವ ಅಗತ್ಯತೆ ಇದೆ. ಕರ್ನಾಟಕದಲ್ಲಿ ಮಂಗನ ಕಾಯಿಲೆ ಹಾವಳಿ ಮೂರು ನಾಲ್ಕು ಜಿಲ್ಲೆಗಳಲ್ಲಿದೆ. ಕಾಯಿಲೆಗೆ ವ್ಯಾಕ್ಸಿನ್ ತಯಾರಿಸಬಹುದಾಗಿದ್ದು, ಸಂಶೋಧನಾ ಕಾರ್ಯಕ್ಕೆ ಸಿಎಸ್‍ಆರ್ ಹಣವನ್ನು ವಿನಿಯೋಗವಾಗಬೇಕು ಎಂದು ಗುಂಡೂರಾವ್ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಇನ್ಫೋಸಿಸ್ ಫೌಂಡೇಶನ್, ಯುಸೈಡ್, ಜಿ.ಇ.ಹೆಲ್ತ್ ಕೇರ್, ಬಾಷ್ ಗ್ಲೋಬಲ್ ಸಾಫ್ಟ್‌ ವೇರ್ ಟೆಕ್ನಾಲಜೀಸ್, ಅಸ್ಟ್ರಜೆನಕಾ, ಬಯೋಕಾನ್ ಫೌಂಡೇಶನ್, ಎಚ್‍ಸಿಎಲ್ ಫೌಂಡೇಶನ್, ಇಂಟೆಲ್ ಕಾಪೆರ್Çರೇಶನ್, ಯುನಿಸೆಫ್ ಸೇರಿದಂತೆ ಇನ್ನಿತರ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News