ರಾಜ್ಯಪಾಲರ ನಿರ್ಧಾರದಿಂದ ಎಚ್‌.ಡಿ.ಕುಮಾರಸ್ವಾಮಿ ತಲೆದಂಡ : ಸಚಿವ ದಿನೇಶ್ ಗುಂಡೂರಾವ್

Update: 2024-08-23 07:19 GMT

ಹುಬ್ಬಳ್ಳಿ : ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಲೆದಂಡ ಆಗಲಿದೆ. ಇದು ಬಿಜೆಪಿಯವರು ಮಾಡಿದ ಹುನ್ನಾರವಾಗಿದ್ದು, ಬಿಜೆಪಿಯವರಿಗೆ ಜೆಡಿಎಸ್ ಮುಗಿಸಬೇಕು ಎನ್ನುವ ಚಿಂತನೆ ಬಹಳ ದಿನಗಳಿಂದ ಇತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಬಿಜೆಪಿ ನಾಯಕರು ಜೆಡಿಎಸ್ ಮುಗಿಸಬೇಕು ಎನ್ನುವ ಹುನ್ನಾರ ಮಾಡಿದ್ದರು. ಇದೀಗ ಎಚ್.ಡಿ.ಕುಮಾರಸ್ವಾಮಿ ಅವರ ಹಳೇ ಪ್ರಕರಣವನ್ನು ಮುನ್ನೆಲೆಗೆ ತಂದವರೇ ಬಿಜೆಪಿಯವರು. ಗಣಿ ಇಲಾಖೆಯಲ್ಲಿ ಹಿಂದೆ ಹಗರಣವಾಗಿತ್ತು. ಇದೀಗ ಕುಮಾರಸ್ವಾಮಿ ಕೇಂದ್ರದಲ್ಲಿ ಗಣಿ ಸಚಿವರಾಗಿದ್ದಾರೆ. ಹೀಗಾಗಿ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದಿಂದ ಕುಮಾರಸ್ವಾಮಿ ಅವರ ತಲೆದಂಡ ಆಗಲಿದೆ. ಇದೀಗ ಅವರ ಸಹಿ ಫೋರ್ಜರಿ ಎಂದು ಹೇಳಿತ್ತಿದ್ದು, ಇಷ್ಟು ದಿನ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದ ಕಿಂಗ್. ಇವರ ತಂದೆ ದೇಶ ಕಂಡ ದೊಡ್ಡ ಭ್ರಷ್ಟಾಚಾರಿ. ತಂದೆ ಮುಖ್ಯಮಂತ್ರಿಯಿದ್ದಾಗ ವಿಜಯೇಂದ್ರ ಅಧಿಕಾರ ಮಾಡುತ್ತಿದ್ದರು ಎಂದು ಅವರ ಸಚಿವರೇ ಹೇಳಿದ್ದಾರೆ. ಅಂದು ವಿಜಯೇಂದ್ರ ತೆರಿಗೆ ಎಂದೇ ನಿಗಧಿಯಾಗಿತ್ತು. ಇವರು ನಮ್ಮ ಬಗ್ಗೆ, ನಮ್ಮ ಮುಖ್ಯಮಂತ್ರಿಯ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ಇಡೀ ಶಾಸಕರು ಮುಖ್ಯಮಂತ್ರಿ ಪರವಾಗಿ ನಿಂತಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ ಎಂದು ತಿರುಗೇಟು ನೀಡಿದರು.

ರಾಜ್ಯಪಾಲರ ಬಗ್ಗೆ ನಮಗೆ ಬಹಳ ಗೌರವವಿತ್ತು. ಆದರೆ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ನಿಯಮ ಬಾಹಿರವಾಗಿ ಖಾಸಗಿ ದೂರು ಆಧರಿಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಸೂಚಿಸಿದ್ದಾರೆ. ಆದರೆ ಅಧಿಕೃತ ತನಿಖಾ ಸಂಸ್ಥೆಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ಧನರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಅನುಮತಿ ನೀಡಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News