ಬಿಹಾರ ಸರಕಾರದಂತೆ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ: ರಾಜ್ಯ ಸರಕಾರಕ್ಕೆ ಬಿ.ಕೆ ಹರಿಪ್ರಸಾದ್‌ ಒತ್ತಾಯ

Update: 2023-10-03 05:41 GMT

ಬೆಂಗಳೂರು: ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸಬೇಕು  ಎಂದು ಕಾಂಗ್ರೆಸ್‌ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಒತ್ತಾಯಿಸಿದ್ದಾರೆ. 

ಈ ಸಂಬಂಧ ಮಂಗಳವಾರ ಎಕ್ಸ್‌ ನಲ್ಲಿ ಪ್ರತಿಕ್ರಿಯಿಸಿರುವ ಅವರು, ʼʼಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕ ರಾಹುಲ್‌ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನ ಬಹಿರಂಗ ಪಡಿಸುವ ದಿಟ್ಟತನ ತೋರಬೇಕಿದೆʼʼ ಎಂದು ಹೇಳಿದ್ದಾರೆ. 

"ಇಂಡಿಯಾ"ಮೈತ್ರಿ ಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಸರ್ಕಾರದ ಐತಿಹಾಸಿಕ ನಡೆ ಅಭಿನಂದನೀಯ. ಹಿಂದುಳಿದ,ಶೋಷಿತವೂ ಸೇರಿದಂತೆ ಎಲ್ಲಾ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆʼʼ ಎಂದು ಹರಿಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. 

ಬಿಹಾರ ಜಾತಿಗಣತಿ ವರದಿ ಪ್ರಕಟ

ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿಯಿರುವಂತೆ ಸೋಮವಾರ ಬಿಹಾರ ಸರಕಾರವು ತನ್ನ ವಿವಾದಾತ್ಮಕ ಜಾತಿ ಆಧಾರಿತ ಗಣತಿಯ ಫಲಿತಾಂಶಗಳನ್ನು ಬಹಿರಂಗಗೊಳಿಸಿದೆ. ರಾಜ್ಯದ ಜನಸಂಖ್ಯೆಯ ಶೇ.63ರಷ್ಟು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸೇರಿದ್ದಾರೆ ಎನ್ನುವುದನ್ನು ಜಾತಿಗಣತಿಯು ಬೆಳಕಿಗೆ ತಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News