ಮೋಡ ಬಿತ್ತನೆ ವಿಚಾರವಾಗಿ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2023-12-08 13:10 GMT

ಬೆಳಗಾವಿ: ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಮೋಡಬಿತ್ತನೆ ಮಾಡುವ ಬಗ್ಗೆ ನಾನು ಸಕಾರಾತ್ಮಕ ಭಾವನೆ ಹೊಂದಿದ್ದು, ಈ ವಿಚಾರವಾಗಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ವಿಧಾನಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ್ ಮಾತನಾಡಿ, ‘ಬರಗಾಲದ ಪರಿಸ್ಥಿತಿಯಲ್ಲಿ ತುಂಗಭದ್ರಾ ಆಣೆಕಟ್ಟಿನ ಕೆಳಭಾಗದ ರೈತರ ಬೆಳೆಗೆ ನೀರು ಒದಗಿಸಬೇಕಿದೆ. ಈ ವಿಚಾರವಾಗಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದಾಗ, ಆಣೆಕಟ್ಟಿನ ಒಳಹರಿವು ಹೆಚ್ಚಾದರೆ ನೀರು ಬಿಡುವುದಾಗಿ ಹೇಳಿದರು. ನಾನು ಹವಾಮಾನ ಇಲಾಖೆ ಹಾಗೂ ಇತರೆ ವಿಜ್ಞಾನಿಗಳ ಜತೆ ಚರ್ಚೆ ಮಾಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಉತ್ತಮ ಮೋಡಗಳಿದ್ದು, ಈ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿದರೆ ಉತ್ತಮ ಪ್ರಮಾಣದ ನೀರು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸರಕಾರ ಮೋಡ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಮೋಡ ಬಿತ್ತನೆ ವಿಚಾರವಾಗಿ ಅನೇಕ ರಾಜ್ಯಗಳಲ್ಲಿ ಪ್ರಯೋಗ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಎಚ್.ಕೆ ಪಾಟೀಲ್ ಸಚಿವರಾಗಿದ್ದಾಗಲೂ ಈ ಪ್ರಯೋಗ ಮಾಡಲಾಗಿತ್ತು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಶಾಸಕ ಪ್ರಕಾಶ್ ಕೋಳುವಾಡ ತಮ್ಮ ಜಿಲ್ಲೆಯಲ್ಲಿ ಉಚಿತವಾಗಿ ಈ ಪ್ರಯತ್ನ ಮಾಡಿದ್ದು, ಉತ್ತಮ ಫಲಿತಾಂಶ ಬಂದಿರುವ ಬಗ್ಗೆ ವರದಿ ಇದೆ ಎಂದು ಶಿವಕುಮಾರ್ ತಿಳಿಸಿದರು.

ಈ ವಿಚಾರದಲ್ಲಿ ಟೆಂಡರ್ ಹಾಗೂ ಇತರೆ ಪ್ರಕ್ರಿಯೆಯ ತಾಂತ್ರಿಕ ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ವಿರೋಧ ಪಕ್ಷಗಳು ಇದನ್ನು ನಿಮ್ಮ ಪಕ್ಷದ ಶಾಸಕರಿಗೆ ನೀಡಿದ್ದೀರಿ ಎಂದು ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಇದಕ್ಕೆ 50 ಲಕ್ಷದಿಂದ 1 ಕೋಟಿವರೆಗೂ ವೆಚ್ಚ ತಗುಲಬಹುದು. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚೆ ಮಾಡುತ್ತೇನೆ. ಈ ವಿಚಾರವಾಗಿ ಮತ್ತೊಮ್ಮೆ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ಎಂದು ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News